ಮಡಿಕೇರಿ, ಆ. ೧೧: ಜಿಲ್ಲೆಯಲ್ಲಿ ೧೮ ವರ್ಷ ಮೇಲ್ಪಟ್ಟ ೨,೨೭,೮೦೭ ಮಂದಿಗೆ ಕೋವಿಡ್ ನಿರೋಧಕ ಲಸಿಕೆಯ ಮೊದಲನೆಯ ಡೋಸ್ ನೀಡಲಾಗಿದೆ ಎಂದು ಜಿಲ್ಲಾ ಲಸಿಕಾ ಅಧಿಕಾರಿ ಡಾ. ಗೋಪಿನಾಥ್ ಅವರು ಮಾಹಿತಿ ನೀಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿರುವ ೧೮ ವರ್ಷ ಮೇಲ್ಪಟ್ಟ ಒಟ್ಟು ೪,೦೨,೫೬೦ ಮಂದಿಯ ಪೈಕಿ ಶೇ.೫೬.೫೯ ರಷ್ಟು ಜನರಿಗೆ ಲಸಿಕೆಯ ಮೊದಲನೆಯ ಡೋಸ್ ದೊರೆತಿದೆ. ಒಟ್ಟು ೮೨,೮೭೯ ಜನರು ೨ನೇ ಡೋಸ್ ಪಡೆದುಕೊಂಡಿದ್ದು, ಶೇ.೨೦.೫೯ ಸಾಧನೆಯಾಗಿದೆ ಎಂದು ಕೂಡ ಅವರು ತಿಳಿಸಿದ್ದಾರೆ.೧೭,೫೩೧ ವಿದ್ಯಾರ್ಥಿಗಳಿಗೆ ಲಸಿಕೆ ಪದವಿ ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವ ಅಭಿಯಾನಕ್ಕೆ ರಾಜ್ಯ ಸರಕಾರ ಚಾಲನೆ ನೀಡಿದ್ದು, ಜಿಲ್ಲೆಯಲ್ಲಿಯೂ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ಕಾರ್ಯಪ್ರವೃತ್ತರಾಗಿ ಒಟ್ಟು ೧೭,೫೩೧ ವಿದ್ಯಾರ್ಥಿಗಳು ಲಸಿಕೆಯ ಮೊದಲನೆ ಡೋಸ್‌ಅನ್ನು ಪಡೆದುಕೊಂಡಿದ್ದಾರೆ. ಕೊಡಗಿನಲ್ಲಿ ಪದವಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಮೊದಲ ಪುಟದಿಂದ) ಸಂಖ್ಯೆ ೧೧,೪೮೩ ಆಗಿದ್ದರೂ, ಜಿಲ್ಲೆಯವರೇ ಆದ ಇತರೆಡೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಲಸಿಕೆ ಪಡೆದಿದ್ದು ಒಟ್ಟು ೧೭,೫೩೧ ವಿದ್ಯಾರ್ಥಿಗಳು ಲಸಿಕೆ ಪಡೆದುಕೊಂಡಿದ್ದಾರೆ.

ಕೋವಿಡ್ ಸಂಬAಧ ನಿರ್ಬಂಧಗಳು ಇದ್ದ ಕಾರಣ ಈ ವಿದ್ಯಾರ್ಥಿಗಳು ಕೊಡಗಿನಲ್ಲಿಯೇ ಲಸಿಕೆ ಪಡೆದುಕೊಂಡಿರುವುದಾಗಿ ಡಾ. ಗೋಪಿನಾಥ್ ವಿವರಿಸಿದ್ದಾರೆ. ಇದಲ್ಲದೆ ೪೧೬ ಬೋಧಕ ಸಿಬ್ಬಂದಿ ಹಾಗೂ ೪೪೬ ಬೋಧಕೇತರ ಸಿಬ್ಬಂದಿಗಳು ಕೂಡ ಮೊದಲನೆಯ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.

೧೯೬ ಲಸಿಕಾ ಕೇಂದ್ರಗಳಿಗೆ ಲಸಿಕೆ ಸರಬರಾಜು

ಜಿಲ್ಲೆಗೆ ಪ್ರತಿನಿತ್ಯ ಲಸಿಕೆ ಸರಬರಾಜು ಆಗುತ್ತಿಲ್ಲ. ರಾಜ್ಯದಿಂದ ದಿನಬಿಟ್ಟು ದಿನ ಸುಮಾರು ೪ ರಿಂದ ೫ ಸಾವಿರ ಡೋಸ್‌ಗಳಷ್ಟು ಲಸಿಕೆ ಸರಬರಾಜಾಗುತ್ತಿದೆ. ಈ ಲಸಿಕೆಯು ಜಿಲ್ಲೆಯಲ್ಲಿನ ಎಲ್ಲಾ ಗ್ರಾಮಗಳಿಗೂ ತಲುಪಿಸುವ ಕಾರ್ಯ ಆಗಬೇಕಿದೆ. ಪ್ರತಿನಿತ್ಯ ಎಲ್ಲಾ ಗ್ರಾಮಗಳಿಗೆ ಲಸಿಕೆ ಸರಬರಾಜು ಮಾಡುವುದು ಅಸಾಧ್ಯ. ಆದರೂ ಎಲ್ಲರಿಗೂ ಲಸಿಕೆ ನೀಡುವ ಗುರಿಯನ್ನು ಇಲಾಖೆ ಹೊಂದಿದ್ದು, ಪ್ರತಿದಿನ ಇಂತಿಷ್ಟು ಲಸಿಕಾ ಕೇಂದ್ರಗಳನ್ನು ಗುರುತಿಸಿ ಅಲ್ಲಿಗೆ ಲಸಿಕಾ ಸರಬರಾಜು ಮಾಡುವ ಕಾರ್ಯವಾಗುತ್ತಿರುವುದಾಗಿ ಡಾ.ಗೋಪಿನಾಥ್ ಅವರು ಮಾಹಿತಿ ನೀಡಿದ್ದಾರೆ.

ಮೊದಲಿಗೆ ಜಿಲ್ಲಾ ಕೇಂದ್ರ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತಿತ್ತು. ಆದರೆ ಇದೀಗ ಗ್ರಾಮ-ಗ್ರಾಮಗಳಲ್ಲಿನ ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು ಗ್ರಾಮದ ನಿವಾಸಿಗಳು ದೂರದ ಊರುಗಳಿಗೆ ತೆರಳುವುದನ್ನು ತಪ್ಪಿಸಲಾಗಿದೆ. ಲಸಿಕೆ ದೊರೆಯುವ ನಿಗದಿತ ಸ್ಥಳಗಳ ಬಗ್ಗೆ ಪ್ರತಿನಿತ್ಯ ಪತ್ರಿಕೆಗಳಲ್ಲಿ ಮಾಹಿತಿ ನೀಡಲಾಗುತ್ತಿದೆ.