ಸೋಮವಾರಪೇಟೆ, ಆ. ೯: ತಾಲೂಕಿನ ಹರಗ ಗ್ರಾಮ ಸಂಪರ್ಕ ರಸ್ತೆಯಲ್ಲಿ ಬಿರುಕು ಮೂಡಿದ್ದು, ಮಳೆ ಮುಂದುವರೆದರೆ ರಸ್ತೆಯೇ ಕುಸಿಯುವ ಆತಂಕ ಎದುರಾಗಿದೆ.

ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿರುವ ಹರಗ ಗ್ರಾಮ ಸಂಪರ್ಕ ರಸ್ತೆಯು ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳಪಟ್ಟಿದ್ದು, ಕಳೆದ ವರ್ಷವಷ್ಟೇ ರೂ. ೯೦ ಲಕ್ಷ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಮಾಡಲಾಗಿದೆ.

ಈ ಸೇತುವೆಯ ಎರಡೂ ಬದಿಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಸುರಿಯಲಾಗಿದ್ದು, ಕಳೆದ ವಾರ ಸುರಿದ ಮಳೆಗೆ ರಸ್ತೆಯ ಒಂದು ಪಾರ್ಶ್ವದಲ್ಲಿ ಬಿರುಕು ಮೂಡಿದೆ. ಹರಗ ಗ್ರಾಮ ವ್ಯಾಪ್ತಿಯಲ್ಲಿ ಈಗಾಗಲೇ ೯೦ ಇಂಚಿಗೂ ಅಧಿಕ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಮಳೆಯಾದರೆ ರಸ್ತೆ ಕುಸಿಯುವುದರೊಂದಿಗೆ ಗ್ರಾಮಕ್ಕೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.

ರಸ್ತೆಯ ಬದಿಯಲ್ಲಿ ತಡೆಗೋಡೆ ನಿರ್ಮಿಸದ ಹಿನ್ನೆಲೆ ಅಪಾಯ ಎದುರಾಗಿದ್ದು, ಸಂಬAಧಿಸಿದ ಲೋಕೋಪಯೋಗಿ ಇಲಾಖೆ ಈ ಬಗ್ಗೆ ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.