ಮಡಿಕೇರಿ, ಆ. ೯: ಜಿಲ್ಲೆಯಿಂದ ಐದು ಬಾರಿ ಚುನಾಯಿತರಾಗಿರುವ ಹಾಗೂ ಕೊಡವ ಜನಾಂಗದ ಶಾಸಕರಾಗಿರುವ ಅಪ್ಪಚ್ಚುರಂಜನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಕೊಡವಾಮೆರ ಕೊಂಡಾಟ ಸಂಘಟನೆಯ ಮೂಲಕ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮುಖ್ಯಮಂತ್ರಿಗಳು ಇಂದು ಮೈಸೂರಿಗೆ ಆಗಮಿಸಿದ್ದ ಸಂದರ್ಭ ಅವರನ್ನು ಭೇಟಿ ಮಾಡಿದ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ, ನಿರ್ದೇಶಕರಾದ ಕುಲ್ಲಚಂಡ ವಿನುತ ಕೇಸರಿ, ಚಿರಿಯಪಂಡ ವಿಶುಕಾಳಪ್ಪ, ಸಮಾಜ ಸೇವಕರಾದ ಮಾಚಿಮಂಡ ಗಪ್ಪಣ್ಣ, ಅಪ್ಪನೆರವಂಡ ಮನೋಜ್ ಮಂದಪ್ಪ, ಮೈಸೂರು ಮಹಾ ನಗರಪಾಲಿಕೆ ಸದಸ್ಯ ಮಾಳೆಯಂಡ ಸುಬ್ಬಯ್ಯ ಮತ್ತಿತರರು ಈ ಬಗ್ಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಪ್ರತ್ಯೇಕ ‘ಸಿ’ ರಾಜ್ಯವಾಗಿದ್ದ ಕೊಡಗು, ಬದಲಾದ ರಾಜಕೀಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಯಲ್ಲಿ ಕರ್ನಾಟಕದೊಂದಿಗೆ ವಿಲೀನವಾಗಿದೆ. ವಿಲೀನ ಮಾಡುವ ಸಮಯದಲ್ಲಿ ಅಂದಿನ ವಿಶಾಲ ಕರ್ನಾಟಕ ಸರ್ಕಾರ ಕೊಡಗಿಗೆ ಎಂದಿಗೂ ಕೂಡ ಸಾಮಾಜಿಕ, ಆರ್ಥಿಕ, ಹಾಗೂ ರಾಜಕೀಯ ಭದ್ರತೆಯೊಂದಿಗೆ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನು ನೀಡಿತ್ತು. ಆದರೆ ಇತ್ತೀಚಿನ ಎಲ್ಲಾ ಸರ್ಕಾರಗಳೂ ಈ ಭರವಸೆಯನ್ನು ಮರೆತಿದ್ದು ಕೊಡಗು ಮತ್ತು ಕೊಡವರನ್ನು ಲೆಕ್ಕಕುಂಟು ಆಟಕಿಲ್ಲ ಎಂಬAತೆ ಬಿಂಬಿಸುತ್ತಿರುವುದು ದುರಂತವಾಗಿದೆ. ತಮ್ಮ ಸರ್ಕಾರದಲ್ಲಿಯೂ, ಹಿರಿಯ ಶಾಸಕರಾದ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದೇ ಬೇಸರ ತಂದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಪ್ಪಚ್ಚು ರಂಜನ್ ಅವರೂ ಒಬ್ಬ ಕೊಡವರಾಗಿದ್ದು, ಐದು ಬಾರಿ ವಿಧಾನಸಭಾ ಸದಸ್ಯರಾಗುವ ಜೊತೆಗೆ ಇಡೀ ಕೊಡಗನ್ನು ಬಿಜೆಪಿಮಯ ಮಾಡುವುದರಲ್ಲಿ ಅವರ ಕೊಡುಗೆಯನ್ನು ಮರೆಮಾಚುವಂತಿಲ್ಲ. ಕೊಡವ ಜನಾಂಗವೂ ಸೇನೆ ಮತ್ತು ಕ್ರೀಡೆಯಲ್ಲಿಯೂ ದೇಶ ಹಾಗೂ ರಾಜ್ಯಕ್ಕೆ ವಿಶೇಷ ಕೊಡುಗೆಯನ್ನು ನೀಡಿದೆ. ಅಲ್ಲದೆ ವಿವಿಧ ಮೂಲ ಗಳಿಂದ ರಾಜ್ಯದ ಬೊಕ್ಕಸಕ್ಕೆ ತೆರಿಗೆ ಯನ್ನು ಹೇರಳವಾಗಿ ತುಂಬುತ್ತಿರುವ ಕೊಡಗು ಮತ್ತು ಕೊಡವರಿಗೆ ತಮ್ಮ ಸರ್ಕಾರ ಕನಿಷ್ಟ ಮಂತ್ರಿ ಸ್ಥಾನವನ್ನೂ ನೀಡದಿರುವುದನ್ನು ಖಂಡಿಸುತ್ತೇವೆ ಎಂದು ಉಲ್ಲೇಖಿಸಲಾಗಿದ್ದು, ಸಚಿವ ಸ್ಥಾನ ನೀಡಲು ಆಗ್ರಹಿಸಲಾಗಿದೆ.