ಪೊನ್ನAಪೇಟೆ, ಆ. ೮: ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ವಾರಾಂತ್ಯದ ಕರ್ಫ್ಯೂ ಹಿನ್ನೆಲೆ ದಕ್ಷಿಣ ಕೊಡಗಿನ ಗಡಿಭಾಗ ಕುಟ್ಟದಲ್ಲಿ ಜನರ ಓಡಾಟವಿಲ್ಲದೇ ಬಿಕೋ ಎನ್ನುತ್ತಿತ್ತು. ಕುಟ್ಟ ಚೆಕ್‌ಪೋಸ್ಟ್ನಲ್ಲಿ ಪೊಲೀಸ್ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದ್ದು, ಕೇರಳದಿಂದ ಕೊಡಗು ಜಿಲ್ಲೆಗೆ ಬರುವ ವಾಹನಗಳನ್ನು ಗಡಿಯಲ್ಲೇ ತಡೆಹಿಡಿಯಲಾಗಿದೆ. ಲಾರಿಗಳು ಸೇರಿದಂತೆ ಕೆಲವು ವಾಹನಗಳು ನಿನ್ನೆಯಿಂದ ಚೆಕ್‌ಪೋಸ್ಟ್ ಹೊರಭಾಗದಲ್ಲಿ ಸಾಲಾಗಿ ನಿಂತಿವೆ. ಕುಟ್ಟ ಪೊಲೀಸರು ಗಡಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದು ತುರ್ತು ವಾಹನ ಹೊರತುಪಡಿಸಿ ಯಾವುದೇ ರೀತಿಯ ವಾಹನಗಳನ್ನು ಬಿಡುತ್ತಿಲ್ಲ.

ಕುಟ್ಟ ವೃತ್ತ ನಿರೀಕ್ಷಕ ಸಿ.ಎ. ಮಂಜಪ್ಪ, ಠಾಣಾಧಿಕಾರಿ ಹೆಚ್.ಜೆ. ಚಂದ್ರಪ್ಪ, ಉಪ ಠಾಣಾಧಿಕಾರಿಗಳಾದ ಚಂದ್ರು, ಸುರೇಶ್ ಹಾಗೂ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿ ರಾಧ, ರೇಣುಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸಂತೋಷ್ ಗಡಿಯಲ್ಲಿ ಕರ್ತವ್ಯದಲ್ಲಿದ್ದರು. -ಚನ್ನನಾಯಕ