.ಆ.೫ : ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಿರಿಜಾ ವೆಂಕಟೇಶ್ ಹಾಗೂ ಉಪಾಧ್ಯಕ್ಷರಾಗಿ ಬೊಟ್ಟಂಗಡ ದಶಮಿ ಅವರು ಆಯ್ಕೆಯಾದರು. ಪೊನ್ನಂಪೇಟೆ ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್ ಯೋಗಾನಂದ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.

ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ೨೦ ಸ್ಥಾನಗಳ ಪೈಕಿ ಚುನಾವಣೆಯಲ್ಲಿ ಬಿಜೆಪಿ ೧೦ ಸ್ಥಾನ, ಕಾಂಗ್ರೆಸ್ ೯ ಸ್ಥಾನ ಪಡೆದುಕೊಂಡಿತ್ತು. ೧ ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿತ್ತು. ಗ್ರಾಮ ಪಂಚಾಯಿತಿಯ ಚುಕ್ಕಾಣಿ ಹಿಡಿಯಲು ಎರಡು ಪಕ್ಷದ ಬೆಂಬಲಿತರು ಸ್ಪರ್ಧೆಗಿಳಿದಿದ್ದರು.

ಬಿಸಿಎಂ ಮೀಸಲಾತಿ ಇದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಿರಿಜಾ ವೆಂಕಟೇಶ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಲಿರ ರಶೀದ್ ಸ್ಪರ್ಧಿಸಿದ್ದರು. ಒಟ್ಟು ೨೦ ಸದಸ್ಯ ಬಲದ ಪಂಚಾಯಿತಿಯಲ್ಲಿ ಹೆಚ್.ವಿ.ಗಿರಿಜಾ ೧೧ ಮತ, ಆಲಿರಾ ರಶೀದ್ ೮ ಮತ ಪಡೆದರೆ, ಒಂದು ಮತ ಅನರ್ಹವಾಯಿತು.

ಸಾಮಾನ್ಯ ಮಹಿಳಾ ಸ್ಥಾನದ ಮೀಸಲಾತಿ ಇದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಬೊಟ್ಟಂಗಡ ದಶಮಿ ಹಾಗೂ ಕಾಂಗ್ರೆಸ್ ಬೆಂಬಲಿತ ಕರ್ತಮಾಡ ರಸಿಕ ಸ್ಪರ್ಧಿಸಿದ್ದರು. ದಶಮಿ ೧೨ ಮತ ಹಾಗೂ ರಸಿಕ ೮ ಮತ ಪಡೆದರು.

ಚುನಾವಣಾಧಿಕಾರಿಗಳು ನಿಗದಿತ ಸಮಯದಲ್ಲಿ ನಾಮಪತ್ರ ಪರಿಶೀಲನೆ ನಡೆಸಿ, ಚುನಾವಣೆಗೆ ಸ್ಪರ್ಧಿಸಿದ್ದ ೪ ಅಭ್ಯರ್ಥಿಗಳ ನಾಮಪತ್ರಗಳು ಕ್ರಮ ಬದ್ಧವಾಗಿದ್ದರಿಂದ ಚುನಾವಣೆ ಪ್ರಕ್ರಿಯೆ ಮುಂದುವರೆಸಿದರು. ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಯಾವುದೇ ಗೊಂದಲ ವಿಲ್ಲದೆ ಸುಸೂತ್ರವಾಗಿ ನಡೆಯಿತು. ಚುನಾವಣಾ ಪ್ರಕ್ರಿಯೆಯಲ್ಲಿ ೨೦ ಗ್ರಾಮ ಪಂಚಾಯಿತಿ ಸದಸ್ಯರುಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು,ಸಹಾಯಕ ಚುನಾವಣಾ ಅಧಿಕಾರಿ ಮಂಜುನಾಥ್, ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅಧ್ಯಕ್ಷರಾಗಿ ಆಯ್ಕೆಯಾದ ಗಿರಿಜಾ ವೆಂಕಟೇಶ್ ‘ಶಕ್ತಿ’ಯೊಂದಿಗೆ ಮಾತನಾಡಿ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ, ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಯಾಗಿರುವುದು ಖುಷಿ ತಂದಿದೆ. ಹಿರಿಯರ ಮಾರ್ಗದರ್ಶನ ಪಡೆದು ಉತ್ತಮ ಆಡಳಿತ ನೀಡುವುದಾಗಿ ಭರವಸೆ ನೀಡಿದರು.

ನೂತನ ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ ಮಾತನಾಡಿ ಸರ್ವ ಸದಸ್ಯರ ಸಹಕಾರದೊಂದಿಗೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಭ್ರಷ್ಟಾಚಾರ ರಹಿತ ಆಡಳಿತದ ಮೂಲಕ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಯನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲಾಗುವುದು ಎಂದರು.

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಪಂಚಾಯಿತಿ ಸದಸ್ಯರು ಹಾಗೂ ಪಕ್ಷದ ಮುಖಂಡರು ಶುಭಕೋರಿದರು. ಈ ಸಂದರ್ಭ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ, ಕಾರ್ಯದರ್ಶಿ ಕಿಲನ್ ಗಣಪತಿ, ಮಲ್ಲಮಾಡ ಪ್ರಭು, ಬಿಜೆಪಿ ತಾಲೂಕು ಅಧ್ಯಕ್ಷ ನೆಲ್ಲೀರ ಚಲನ್, ಜಿಲ್ಲಾ ಖಜಾಂಚಿ ಚೆಪ್ಪುಡಿರ ಮಾಚಯ್ಯ, ತಾಲೂಕು ಕಾರ್ಯದರ್ಶಿ ವಾಟೆರೀರ ಬೋಪಣ್ಣ, ರಾಜ್ಯ ಕೃಷಿ ಮೋರ್ಚಾ ಸಮಿತಿ ಕೊಡಗು ಉಸ್ತುವಾರಿ ಯಮುನ ಚಂಗಪ್ಪ, ಜಿಲ್ಲಾ ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ರಂಡ ಕಬೀರ್ ದಾಸ್, ತಾಲೂಕು ಬಿಜೆಪಿ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರವೀಣ್, ಪೊನ್ನಂಪೇಟೆ ಮಹಾ ಶಕ್ತಿ ಕೇಂದ್ರ ಪ್ರಮುಖ್ ಆಲೆಮಾಡ ಸುಧೀರ್, ಪೊನ್ನಂಪೇಟೆ ಶಕ್ತಿ ಕೇಂದ್ರ ಪ್ರಮುಖರಾದ ಕೋಟೆರ ಕಿಶನ್, ಮೂಕಳೇರ ಮಧುಕುಮಾರ್, ಕೃಷಿ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ತೋರಿರ ವಿನು, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರೀರ ನವೀನ್,ಪ್ರಧಾನ ಕಾರ್ಯದರ್ಶಿ ಎ.ಜೆ.ಬಾಬು ಮುಖಂಡರಾದ ಮತ್ರಂಡ ದಿಲ್ಲು, ಕೊಲ್ಲೀರ ಬೋಪಣ್ಣ ಮುಂತಾದವರು ಇದ್ದರು.

ಮುಂಜಾಗೃತಾ ಕ್ರಮವಾಗಿ ಪೊಲೀಸರು ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದರು. ಪಂಚಾಯತಿ ಆವರಣಕ್ಕೆ ಸದಸ್ಯರು ಸಿಬ್ಬಂದಿ ಪತ್ರಕರ್ತರನ್ನು ಹೊರತುಪಡಿಸಿ ಸಾರ್ವಜನಿಕರು ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು. ಗೋಣಿಕೊಪ್ಪ ವೃತ್ತನಿರೀಕ್ಷಕ ಜಯರಾಮ್, ಪೊನ್ನಂಪೇಟೆ ಠಾಣಾಧಿಕಾರಿ ಡಿ.ಕುಮಾರ್ ಹಾಜರಿದ್ದು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

-ಚನ್ನನಾಯಕ