ಸಿದ್ದಾಪುರ, ಆ. ೫: ಅಮ್ಮತ್ತಿ ಹೋಬಳಿ ನಾಡ ಕಚೇರಿಯಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಶೌಚಾಲಯಗಳಿಗೆ ಬಾಗಿಲು ಅಳವಡಿಸದೇ ನಿರ್ಲಕ್ಷö್ಯ ವಹಿಸಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮ್ಮತ್ತಿ ಹೋಬಳಿಯ ನಾಡಕಚೇರಿ ಹಳೆಯದಾಗಿದ್ದು, ಇತ್ತೀಚೆಗೆ ಈ ಕಚೇರಿಯ ಮೇಲ್ಛಾವಣಿ ಹಾಗೂ ಒಳಗಿನ ಕೊಠಡಿಗಳನ್ನು ದುರಸ್ತಿಪಡಿಸಲಾಯಿತು.
ಆದರೆ ನಾಡ ಕಚೇರಿಯ ಸಿಬ್ಬಂದಿಗಳಿಗೆ ಬಳಸಲೆಂದು ಕಚೇರಿಯ ಕಟ್ಟಡದ ಹಿಂಭಾಗದಲ್ಲಿ ಎರಡು ಹೊಸ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಈ ಶೌಚಾಲಯದೊಳಗೆ ಎಲ್ಲಾ ವ್ಯವಸ್ಥೆ ಕಲ್ಪಿಸಿದ್ದು, ಆದರೆ, ಹೊರ ಭಾಗದಲ್ಲಿ ಬಾಗಿಲುಗಳನ್ನು ಅಳವಡಿಸದೇ ಹಾಗೂ ಬಳಸಲು ನೀರಿನ ಸಂಪರ್ಕ ಕಲ್ಪಿಸದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
‘ಹೊರಗೆಲ್ಲಾ ತಳುಕು, ಒಳಗೆಲ್ಲಾ ಹುಳುಕು’ ಎಂಬ ಗಾದೆಯಂತೆ ಕಟ್ಟಡದ ಸುತ್ತಲೂ ಸುಣ್ಣ ಬಣ್ಣ ಬಳಿದು ಕಚೇರಿಯನ್ನು ಅಂದಗೊಳಿಸಲಾಗಿದೆ. ಆದರೆ ಅಗತ್ಯವಾಗಿ ಬೇಕಾದ ಶೌಚಾಲಯಕ್ಕೆ ಬಾಗಿಲು ಇಲ್ಲದೇ ಮಾಡಿರುವ ಕಾಮಗಾರಿಯ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಅದರಲ್ಲೂ ಅಮ್ಮತ್ತಿ ನಾಡ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗಳು ಹೆಚ್ಚಾಗಿದ್ದು, ಇದೀಗ ಸಮಸ್ಯೆಯಾಗಿದೆ. ಈ ಬಗ್ಗೆ ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರರು ಕೂಡಲೇ ಶೌಚಾಲಯಕ್ಕೆ ಬಾಗಿಲನ್ನು ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
-ವಾಸು ಎ.ಎನ್.