ಪೊನ್ನಂಪೇಟೆ, ಆ. ೬: ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಕೊಡಗು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಘಟಕದ ಸಹಯೋಗದಲ್ಲಿ ತಾ. ೧೦ ರಂದು ಗೋಣಿಕೊಪ್ಪಲಿನಲ್ಲಿ ಸಾರ್ವಜನಿಕರಿಗಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಜೇಸಿಸ್ ಸಂಸ್ಥೆಯ ‘ನೀಡ್ ಬ್ಲಡ್, ಕಾಲ್ ಜೆ.ಸಿ.ಐ’ ಯೋಜನೆಯಡಿ ‘ರಕ್ತದಾನ-ಮಾನವಕುಲದ ಶ್ರೇಷ್ಠ ಸೇವೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಈ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕ ಅಧ್ಯಕ್ಷ ಎಂ.ಎನ್. ವನಿತ್‌ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗೋಣಿಕೊಪ್ಪಲಿನ ಬೈಪಾಸ್ ರಸ್ತೆಯಲ್ಲಿರುವ ‘ಸೌಖ್ಯ’ ಸಭಾಂಗಣದಲ್ಲಿ ನಡೆಯಲಿರುವ ಈ ರಕ್ತದಾನ ಶಿಬಿರವು ಬೆಳಿಗ್ಗೆ ೧೦ ಗಂಟೆಗೆ ಆರಂಭಗೊಳ್ಳಲಿದೆ.

ರಕ್ತದಾನ ಶಿಬಿರವನ್ನು ಗೋಣಿಕೊಪ್ಪಲಿನ ದಿ ಮರ್ಚಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ. ಅರುಣ್ ಪೂಣಚ್ಚ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪಲಿನ ಚರ್ಮರೋಗ ತಜ್ಞ ಡಾ ಎ. ಡಿ. ಬೆಳ್ಳಿಯಪ್ಪ ಭಾಗವಹಿಸಲಿದ್ದಾರೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹ ಪ್ರಾಧ್ಯಾಪಕರು ಮತ್ತು ಕೊಡಗು ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕಿನ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಪಿ. ಕರುಂಬಯ್ಯ ಅವರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗದ ಘಟಕದ ಕಾರ್ಯದರ್ಶಿಗಳಾದ ಎ. ಪಿ. ದಿನೇಶ್ ವಹಿಸಲಿದ್ದಾರೆ ಎಂದು ಎಂ.ಎನ್. ವನಿತ್ ಕುಮಾರ್ ವಿವರಿಸಿದ್ದಾರೆ.

ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಲು ಇಚ್ಛಿಸುವ ಆಸಕ್ತರು ಮೊದಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿದೆ. ಆದ್ದರಿಂದ ರಕ್ತದಾನ ಮಾಡುವವರು ದೂರವಾಣಿ ಸಂಖ್ಯೆಯಾದ ೯೮೮೦೫೦೪೨೦೮ ಅಥವಾ ೯೯೪೫೨೬೫೩೮೩ಕ್ಕೆ ಕರೆ ಮಾಡಿ ನಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವAತೆ ವನಿತ್ ಕುಮಾರ್ ಅವರು ಹೇಳಿಕೆಯಲ್ಲಿ ಕೋರಿದ್ದಾರೆ.