ಮಡಿಕೇರಿ, ಆ. ೬: ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕೋವಿಡ್ ನಿರ್ವಹಣೆ ಹಾಗೂ ನೆರೆ ಪರಿಹಾರ ಕಾರ್ಯದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ನಡುವೆ ಜಟಾಪಟಿ ಉಂಟಾಯಿತು.
ಸಭೆಯಲ್ಲಿ ಶಾಸಕ ಬೋಪಯ್ಯ, ಅಧಿಕಾರಿಗಳ ಅಸಮರ್ಪಕ ಕೆಲಸದ ಬಗ್ಗೆ ಗುಡುಗಿದರು. ಅಧಿಕಾರಿಗಳ ತಪ್ಪುಗಳನ್ನು ನೇರವಾಗಿ ಟೀಕಿಸಿದರು. ಹಲವಾರು ವಿಚಾರಗಳಲ್ಲಿ ತಪ್ಪುಗಳಿಗೆ ಕಾರಣವೇನೆಂದು ಪ್ರಶ್ನಿಸಿದರು. ಇದು ಜಿಲ್ಲಾಧಿಕಾರಿಯ ಕೋಪಕ್ಕೂ ಕಾರಣವಾಯಿತು.
ಕೊಡಗು-ಕೇರಳ ಗಡಿಯಲ್ಲಿ ಸೂಕ್ತ ಮುಂಜಾಗ್ರತೆ ವಹಿಸುತ್ತಿಲ್ಲ. ಜಿಲ್ಲಾಡಳಿತ ಇದರಲ್ಲಿ ವೈಫಲ್ಯ ಸಾಧಿಸಿದೆ ಎಂದು ಜಿಲ್ಲಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸ್ ಇಲಾಖೆ ಕಾರ್ಯಕ್ಷಮತೆ ತೋರದೆ ನಿರ್ಲಕ್ಷö್ಯ ವಹಿಸಿದೆ. ಗಡಿಯಲ್ಲಿ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಚೆಕ್ಪೋಸ್ಟ್ಗಳಲ್ಲಿ ಸಿ.ಸಿ. ಕ್ಯಾಮರ ಅಳವಡಿಸಲು ನಿರ್ದೇಶಿಸಿದ್ದರು, ಇದುವರೆಗೂ ಕಾರ್ಯಗತವಾಗಿಲ್ಲ. ಇಬ್ಬರು ಉಪನಿರೀಕ್ಷಕರು ಗಡಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಅದು ಕೂಡ ಆಗುತ್ತಿಲ್ಲ. ಪಾಸಿಟಿವ್ ಇರುವವರು ಕೊಡಗನ್ನು ಪ್ರವೇಶಿಸುತ್ತಿದ್ದಾರೆ. ಪೊಲೀಸರು ಕರ್ತವ್ಯ ಸಂದರ್ಭದಲ್ಲಿ ನಿದ್ದೆ ಮಾಡು ತ್ತಿದ್ದಾರೆ. ಹಣ ಪಡೆದು ಗಡಿಯಲ್ಲಿ ವಾಹನವನ್ನು ಬಿಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
(ಮೊದಲ ಪುಟದಿಂದ) ಅಲ್ಲದೆ ಎಸ್ಟೇಟ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸೋಂಕು ಕಾಣಿಸಿಕೊಂಡಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷö್ಯವೇ ಕಾರಣ ಎಂದು ಕಿಡಿಕಾರಿದರು.
ಇವೆಲ್ಲದರ ನಡುವೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಕೆ.ಜಿ.ಬೋಪಯ್ಯ ಅವರ ಪ್ರಶ್ನೆಗೆ ನೇರವಾಗಿ ಪ್ರತ್ಯುತ್ತರ ನೀಡುತ್ತಿದ್ದರು. ಈ ಹಿಂದಿನ ಸಭೆಗಳಲ್ಲಿ ತಾಳ್ಮೆಯಿಂದ ಉತ್ತರ ನೀಡುತ್ತಿದ್ದ ಜಿಲ್ಲಾಧಿಕಾರಿ ಈ ಸಭೆಯಲ್ಲಿ ಮಾತ್ರ ಕಡ್ಡಿ ತುಂಡು ಮಾಡಿದ ರೀತಿಯಲ್ಲಿ ಉತ್ತರಿಸಿ ೨೪*೭ ಗಡಿಗಳಲ್ಲಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ವಿರುದ್ಧ ಈ ರೀತಿಯ ಆಪಾದನೆ ಮಾಡಬೇಡಿ ಎಂದು ಪ್ರತ್ಯುತ್ತರ ನೀಡಿದರು.