ತಾಲೂಕು ಬಿಜೆಪಿ ಆಕ್ಷೇಪ

*ಗೋಣಿಕೊಪ್ಪ, ಆ. ೬: ಕೊಡಗಿಗೆ ಕಾರ್ಮಿಕರಾಗಿ ಬಂದಿರುವ ಅಸ್ಸಾಂ, ರೋಹಿಂಗ್ಯ ವಲಸಿಗರಿಗೆ ಆಧಾರ್ ಕಾರ್ಡ್ ಮತ್ತು ಮೂಲ ದಾಖಲಾತಿಗಳನ್ನು ಒದಗಿಸಿಕೊಡುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಜಿಲ್ಲೆ ಎದುರಿಸಬೇಕಾಗುತ್ತದೆ ಎಂದು ತಾಲೂಕು ಬಿಜೆಪಿ ವಕ್ತಾರ ಕುಟ್ಟಂಡ ಅಜಿತ್‌ಕರುಂಬಯ್ಯ ಆಕ್ಷೇಪಿಸಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಗೋಣಿಕೊಪ್ಪದ ಬ್ಯಾಂಕ್ ಆಫ್ ಬರೋಡದಲ್ಲಿ ಆಧಾರ್‌ಕಾರ್ಡ್ ಕೇಂದ್ರದಲ್ಲಿ ನಿರಂತರವಾಗಿ ಈ ಚಟುವಟಿಕೆ ನಡೆಯುತ್ತಿದೆ. ಇದಕ್ಕೆ ಸ್ಥಳೀಯ ವೈದ್ಯಾಧಿಕಾರಿಗಳು ವಲಸಿಗರಿಂದ ೧೦೦ ರೂಪಾಯಿ ಹಣ ಪಡೆದು ದೃಢೀಕರಣ ಪತ್ರ ನೀಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ತಮ್ಮ ರಾಜ್ಯದಲ್ಲಿಯೂ ದಾಖಲಾತಿಯನ್ನು ಹೊಂದಿರುವ ಇವರು ಕೊಡಗಿನಲ್ಲಿ ಅಕ್ರಮ ಪ್ರವೇಶದ ಮೂಲಕ ಕಾರ್ಮಿಕರ ಸೋಗಿನಲ್ಲಿ ಕಾಣಿಸಿಕೊಂಡು ಕೊಡಗಿನ ನಿವಾಸಿಗಳಾಗಲು ಸಂಚು ರೂಪಿಸುತ್ತಿದ್ದಾರೆ.

ಮಧ್ಯವರ್ತಿಗಳು ಕಾರ್ಮಿಕರಿಗೆ ಬೆಂಬಲ ನೀಡುತ್ತಾ ಮೂಲ ದಾಖಲಾತಿಗಳಾದ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಗಳನ್ನು ಹೊಂದುವ ವ್ಯವಸ್ಥೆಗೆ ಕಾರಣಕರ್ತರಾಗುತ್ತಿದ್ದಾರೆ. ಈ ವ್ಯವಸ್ಥೆಯಿಂದ ಮುಂದಿನ ದಿನಗಳಲ್ಲಿ ಕೊಡಗಿಗೆ ಬಹುದೊಡ್ಡ ಆತಂಕ ಎದುರಾಗುತ್ತದೆ. ಕೊಡಗು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವ ಮೊದಲು ಬಗೆಹರಿಸಲು ದಿಟ್ಟ ಕ್ರಮ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಅಧಿಕಾರಿಗಳು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದ ಅವರು ಇದೇ ಸ್ಥಿತಿ ಮುಂದುವರೆದರೆ ಭಾರತೀಯ ಜನತಾ ಪಕ್ಷ ದೊಡ್ಡ ಮಟ್ಟದ ಹೋರಾಟವನ್ನು ನಡೆಸುವುದಾಗಿ ಎಚ್ಚರಿಸಿದ್ದಾರೆ.