ಸೋಮವಾರಪೇಟೆ, ಆ. ೬: ವಿಧಾನಸಭಾ ಚುನಾವಣೆಯಲ್ಲಿ ೫ ಬಾರಿ ಗೆಲುವು ಸಾಧಿಸಿರುವ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಈ ಬಾರಿ ಸಚಿವ ಸ್ಥಾನ ಲಭಿಸುವ ನಿರೀಕ್ಷೆ ಇತ್ತು. ಆದರೆ ಸಂಪುಟ ವಿಸ್ತರಣೆಯಲ್ಲಿ ಶಾಸಕರಿಗೆ ಮಂತ್ರಿಗಿರಿ ಸಿಗದ ಹಿನ್ನೆಲೆ ಮಂಡಲ ಬಿಜೆಪಿ ವತಿಯಿಂದ ಸದ್ಯದಲ್ಲೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಗಮನ ಸೆಳೆಯುವುದಾಗಿ ಮಂಡಲ ಬಿಜೆಪಿ ಅಧ್ಯಕ್ಷ ಮನುಕುಮಾರ್ ರೈ ತಿಳಿಸಿದ್ದಾರೆ.

೫ ಬಾರಿ ಶಾಸಕರಾಗಿ ಉತ್ತಮ ಸೇವೆ ಸಲ್ಲಿಸಿರುವ ಅಪ್ಪಚ್ಚುರಂಜನ್ ಅವರು, ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಬಲವರ್ಧನೆಗೆ ಹೆಚ್ಚು ಕೊಡುಗೆ ನೀಡಿದ್ದಾರೆ. ಗ್ರಾ.ಪಂ. ಮಟ್ಟದಿಂದ ಹಿಡಿದು ಲೋಕಸಭಾ ಚುನಾವಣೆವರೆಗೂ ಬಿಜೆಪಿ ಗೆಲ್ಲಲು ಶ್ರಮ ವಹಿಸಿದ್ದಾರೆ. ಇವರಿಗೆ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ಲಭಿಸುವ ನಿರೀಕ್ಷೆಯಿತ್ತು. ಆದರೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಬೇಡಿಕೆ ಮುಂದಿಡಲಾಗುವುದು ಎಂದು ಮನುಕುಮಾರ್ ಹೇಳಿದ್ದಾರೆ.