ಸೋಮವಾರಪೇಟೆ,ಆ.೬: ಸಮೀಪದ ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತೋಳೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಕೃಷಿಕರು ಕಂಗಾಲಾಗಿದ್ದಾರೆ. ಸುಮಾರು ೭ಆನೆಗಳನ್ನು ಒಳಗೊಂಡಿರುವ ಹಿಂಡು ಗ್ರಾಮದ ಜನವಸತಿ ಮತ್ತು ಕೃಷಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿದ್ದು ಕೃಷಿ ಫಸಲು ನಷ್ಟಗೊಳಿಸುತ್ತಿವೆ. ಇಂದು ಚಿಕ್ಕತೋಳೂರು ಗ್ರಾಮದ ಸಿ ಕೆ ಯೋಗೇಂದ್ರ ಸಿ ಕೆ ಚಿಣ್ಣಪ್ಪ ಅವರುಗಳಿಗೆ ಸೇರಿದ ಕಾಫಿ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆಗಳು ಮನಸೋಇಚ್ಛೆ ಸಂಚರಿಸಿವೆ . ತೋಟದಲ್ಲಿ ಬೆಳೆದಿದ್ದ ಬಾಳೆ, ಅಡಿಕೆ, ತೆಂಗು, ಸೇರಿದಂತೆ ನೂರಾರು ಕಾಫಿ ಗಿಡಗಳನ್ನು ತುಳಿದು ನಷ್ಟಪಡಿಸಿವೆ. ತೋಟದಲ್ಲಿ ಬೆಳೆಯಲಾಗಿದ್ದ ಬಾಳೆ ಫಸಲನ್ನು ಸಂಪೂರ್ಣವಾಗಿ ತಿಂದು ನಾಶಗೊಳಿಸಿವೆ. ಈ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಹಾವಳಿ ನಿರಂತರವಾಗಿದ್ದು ಕೃಷಿಕರು ಕಂಗಾಲಾಗಿದ್ದಾರೆ. ಜನವಸತಿ ಮತ್ತು ಕೃಷಿ ಪ್ರದೇಶಗಳಿಗೆ ಲಗ್ಗೆಯಿಟ್ಟು ಹಾನಿ ಗೆuಟಿಜeಜಿiಟಿeಜಳಿಸುತ್ತಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಂತೆ ಗ್ರಾಮಸ್ಥರು ಸಂಬAಧಿಸಿದ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಈವರೆಗೆ ಪ್ರಯೋಜನವಾಗಿಲ್ಲ. ಕಾಡಾನೆ ಗಳಿಂದ ಕೃಷಿ ಫಸಲು ನಷ್ಟಗೊಂಡರೆ ಅರಣ್ಯ ಇಲಾಖೆಯಿಂದ ಬಿಡಿಗಾಸು ಪರಿಹಾರ ನೀಡುತ್ತಾರೆ; ಆದರೆ ಕಾಡಾನೆಗಳು ಅರಣ್ಯವನ್ನು ಬಿಟ್ಟು ಜನವಸತಿ ಹಾಗೂ ಕೃಷಿ ಪ್ರದೇಶಕ್ಕೆ ಬರದಂತೆ ಶಾಶ್ವತ ಪರಿಹಾರವನ್ನು ಕಲ್ಪಿಸಬೇಕೆಂದು ಅನೇಕ ಬಾರಿ ಒತ್ತಾಯಿಸಿದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೃಷಿ ಪ್ರದೇಶಕ್ಕೆ ಲಗ್ಗೆ ಇಡುತ್ತಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಂತೆ ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.