ಶ್ರೀಮಂಗಲ, ಆ. ೫: ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇಂದು ಅಸ್ತಿತ್ವಗೊಂಡಿದೆ. ಪೊನ್ನಂಪೇಟೆಯ ಪೂವಪ್ಪ ಕಾಂಪ್ಲೆಕ್ಸ್ನ ಸಂಘದ ನೂತನ ಕಚೇರಿಯಲ್ಲಿ ಸಭೆ ಸೇರಿ ನೂತನ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಹುದಿಕೇರಿಯ ಹಿರಿಯ ಪತ್ರಕರ್ತ ಕಿರಿಯಮಾಡ ರಾಜ್ ಕುಶಾಲಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಕಳೆದ ೨೮ ವರ್ಷಗಳಿಂದ ಎಸ್.ಎಸ್. ಶೈಲೇಂದ್ರ ಅವರನ್ನು ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಎಸ್.ಎಲ್. ಶಿವಣ್ಣ ಐನಂಡ ಕೆ. ಬೋಪಣ್ಣ, ಖಜಾಂಚಿಯಾಗಿ ಮುಕ್ಕಾಟೀರ ಕೆ. ಅರುಣ್ ಮತ್ತು ನಿರ್ದೇಶಕರುಗಳಾಗಿ ಶ್ರೀಧರ್ ನೆಲ್ಲಿತಾಯ, ಚಟ್ಟಂಗಡ ರವಿ ಸುಬ್ಬಯ್ಯ, ಕೇಶವ ಕಾಮತ್, ಡಾ. ಜೆ. ಸೋಮಣ್ಣ, ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಅಣ್ಣೀರ ಹರೀಶ್ ಮಾದಪ್ಪ, ಟಿ.ಎಲ್. ಶ್ರೀನಿವಾಸ್, ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಕಿರಿಯಮಾಡ ರಾಜ್ ಕುಶಾಲಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಶೈಲೇಂದ್ರ ಇವರು ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಪತ್ರಕರ್ತರ ಕ್ರೀಡೋತ್ಸವ, ಪ್ರವಾಸ ಕಾರ್ಯಕ್ರಮ, ಕ್ಷೇಮಾಭಿವೃದ್ದಿ ನಿಧಿ ಸ್ಥಾಪನೆ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಂಘದ ಸದಸ್ಯರಿಗೆ ನಿವೇಶನ, ವಸತಿ ಹಾಗೂ ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕಲ್ಪಿಸುವ ಉದ್ದೇಶ ಇದೆ ಎಂದು ಹೇಳಿದರು.