ಟೋಕಿಯೋ, ಆ. ೫: ಚಿನ್ನದ ಪದಕದ ಕನಸು ಹೆಚ್ಚಿಸಿದ ಭಾರತದ ಸ್ಟಾರ್ ಕುಸ್ತಿ ಪಟು ರವಿಕುಮಾರ್ ದಹಿಯಾ ಅವರು ಟೋಕಿಯೊ ಒಲಂಪಿಕ್ಸ್ ಕ್ರೀಡಾ ಕೂಟದ ಪುರುಷರ ಫ್ರೀಸ್ಟೆöÊಲ್ ೫೭ ಕೆ.ಜಿ. ವಿಭಾಗದ ಫೈನಲ್ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದು, ರಜತ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಗುರುವಾರ ನಡೆದ ಚಿನ್ನದ ಪದಕದ ಕಾದಾಟದಲ್ಲಿ ರವಿಕುಮಾರ್ ೪-೭ ರಿಂದ ರಷ್ಯಾದ ಒಲಂಪಿಕ್ ಸಮಿತಿಯ ಜಾವೂರ್ ಯುಗೆವ್ ವಿರುದ್ಧ ಸೋಲು ಕಂಡರು. ಅಲ್ಲದೆ ರಜತ ಪದಕವನ್ನು ತಮ್ಮದಾಗಿಸಿಕೊಂಡರು. ರವಿ ಅವರ ಈ ಸಾಧನೆಯಿಂದ ಭಾರತ ಕ್ರೀಡಾಕೂಟದಲ್ಲಿ ಎರಡನೇ ಬೆಳ್ಳಿ ಪದಕ ಗೆದ್ದು ಕೊಂಡಿದೆ. ರವಿ ಅವರು ಈ ಬೆಳ್ಳಿಯೊಂದಿಗೆ ಲಂಡನ್ ಒಲಂಪಿಕ್ ಬೆಳ್ಳಿ ವಿಜೇತ ಸುಶೀಲ್ ಕುಮಾರ್ ಸಾಧನೆಯನ್ನು ಸರಿಗಟ್ಟಿದರು. ಆದರೆ ೨೦೦೮ರ ಒಲಂಪಿಕ್ಸ್ನಲ್ಲಿ ಅಭಿನವ್ ಬಿಂದ್ರಾ ಅವರ ಚಿನ್ನದ ಪದಕ ಗೆದ್ದ ಸಾಧನೆಯನ್ನು ಸರಿಗಟ್ಟಲು ಸಾಧ್ಯವಾಗಲಿಲ್ಲ. ಭಾರತೀಯ ಕುಸ್ತಿಪಟು ಯುಗೇವ್ ವಿರುದ್ಧ ಎಚ್ಚರಿಕೆಯಿಂದ ಆಟ ಆರಂಭಿಸಿದರು. ಆದರೆ ರಷ್ಯಾದ ಕುಸ್ತಿಪಟು ಮೊದಲ ಎರಡು ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ರವಿ ಮರಳಿ ಎರಡು ಅಂಕಗಳನ್ನು ಪಡೆದು ಪಂದ್ಯವನ್ನು ೨-೨ರಲ್ಲಿ ಸಮಬಲಗೊಳಿಸಿದರು. ಯುಗೆವ್ ಎರಡು ಅಂಕಗಳನ್ನು ಪಡೆದು ೭-೪ರ ಮುನ್ನಡೆ ಸಾಧಿಸಿದರು. ಪಟುದೇಳಲು ರವಿ ತನ್ನ ಅತ್ಯುತ್ತಮ ಪ್ರಯತ್ನ ಮಾಡಿದರು ಆದರೆ ಯುಗೆವ್ ತನ್ನ ರಕ್ಷಣೆಯನ್ನು ಬಲವಾಗಿ ಇಟ್ಟುಕೊಂಡರು. ಮತ್ತು ರವಿಗೆ ಅಂಕಗಳನ್ನು ನೀಡಲಿಲ್ಲ. ಪಂದ್ಯದ ಕೊನೆಯಲ್ಲಿ, ರಷ್ಯಾದ ಕುಸ್ತಿಪಟು ಚಿನ್ನದ ಪದಕವನ್ನು ಗೆದ್ದರು ಮತ್ತು ರವಿ ತನ್ನ ಚೊಚ್ಚಲ ಒಲಂಪಿಕ್ಸ್ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.