ಪೊನ್ನಂಪೇಟೆ, ಆ. ೪: ಕಳೆದ ಆರು ತಿಂಗಳ ಅವಧಿಯಲ್ಲಿ ಕ್ರಿಯಾಶೀಲ ಕಾರ್ಯ ಚಟುವಟಿಕೆಗಳ ಮೂಲಕ ತೋರಿದ ಸಾಧನೆಗಾಗಿ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕವು ಪ್ರಸಕ್ತ ಸಾಲಿನ ‘ಎ' ಪ್ರಾಂತ್ಯದ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಜೆ.ಸಿ.ಐ. ಸೋಮವಾರಪೇಟೆ ಪುಷ್ಪಗಿರಿ ಘಟಕದ ಆತಿಥ್ಯದಲ್ಲಿ ಇತ್ತೀಚೆಗೆ ಸೋಮವಾರಪೇಟೆಯಲ್ಲಿ ನಡೆದ ಜೆಸಿಐ ಭಾರತ ವಲಯ ೧೪ರ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಸೆನೆಟರ್ ಭರತ್ ಎನ್. ಆಚಾರ್ಯ ಅವರ ಸಮ್ಮುಖದಲ್ಲಿ ವಲಯದ ‘ಎ' ಪ್ರಾಂತ್ಯದ ವಲಯ ಉಪಾಧ್ಯಕ್ಷರಾದ ಬಾಬು ಎಂ. ಗೌಡ ಅವರು ಈ ಪ್ರಶಸ್ತಿಯನ್ನು ಘಟಕಕ್ಕೆ ಪ್ರದಾನ ಮಾಡಿದರು. ಘಟಕಾಧ್ಯಕ್ಷ ಎಂ.ಎನ್. ವನಿತ್ ಕುಮಾರ್ ಅವರ ನೇತೃತ್ವದ ಪೊನ್ನಂಪೇಟೆ ನಿಸರ್ಗ ಜೇಸಿಸ್ ತಂಡ ಈ ಪ್ರಶಸ್ತಿಯನ್ನು ಸ್ವೀಕರಿಸಿತು.

ವಿವಿಧ ಮನ್ನಣೆ ಸ್ವೀಕಾರ: ಪ್ರಶಸ್ತಿಯ ಜೊತೆಗೆ, ಕಳೆದ ಅರ್ಧ ವರ್ಷದ ಸಾಧನೆಗಾಗಿ ವಲಯದ ವಿವಿಧ ವಿಭಾಗಗಳ ನಿರ್ದೇಶಕರು ಮತ್ತು ಸಂಯೋಜಕರ ವತಿಯಿಂದ ನೀಡಲಾಗುವ ವಿಶೇಷ ಮನ್ನಣೆ ಗಳನ್ನು ಕೂಡ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕ ಪಡೆದುಕೊಂಡಿತು. ಈ ಪೈಕಿ ವಲಯ ೧೪ರ ‘ಎ' ಪ್ರಾಂತ್ಯದ ವಲಯ ಉಪಾಧ್ಯಕ್ಷರು ನೀಡುವ ಉತ್ಕೃಷ್ಟ ಸಾಧನೆಯ ವಿಶೇಷ ಮನ್ನಣೆಯನ್ನು ಘಟಕ ದಕ್ಕಿಸಿಕೊಂಡಿತು.

ಇದಲ್ಲದೆ, ತರಬೇತಿ ವಿಭಾಗದಲ್ಲಿ ವರ್ಷದ ಘಟಕಾಧ್ಯಕ್ಷರು ಎಂಬ ವಿಶೇಷ ಮನ್ನಣೆಯನ್ನು ಘಟಕಾಧ್ಯಕ್ಷ ವನಿತ್ ಕುಮಾರ್ ಪಡೆದು ಕೊಂಡರು. ಲಾಕ್‌ಡೌನ್ ಅವಧಿಯಲ್ಲಿ ಘಟಕ ಆನ್‌ಲೈನ್ ಮೂಲಕ ನಡೆಸಿದ ವಿವಿಧ ತರಬೇತಿ ಕಾರ್ಯಕ್ರಮ ಗಳಿಗಾಗಿ ತರಬೇತಿ ಶ್ರೇಷ್ಠತೆ ಮನ್ನಣೆ, ವಲಯದ ಗೋಗ್ರೀನ್ ನೀಡ್ ಬ್ಲಡ್ ಕಾಲ್ ಜೆಸಿಐ, ರಾಷ್ಟçಮಟ್ಟದ ಪ್ರತಿಭಾ ನ್ವೇಷಣಾ ಪರೀಕ್ಷೆ, ಪರಿಣಾಮ ೨೦೩೦ ವಿಭಾಗಗಳ ವಲಯ ಸಂಯೋಜ ಕರಿಂದಲೂ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕಕ್ಕೆ ಮನ್ನಣೆಗಳು ದೊರೆತಿವೆ. ಇದಲ್ಲದೆ ವಲಯದ ತರಬೇತಿ ಹಾಗೂ ಅಭಿವೃದ್ಧಿ- ಬೆಳವಣಿಗೆ ವಿಭಾಗ ಜಂಟಿಯಾಗಿ ಆಯೋಜಿಸಿದ್ದ ಕೌನ್ ಬನೇಗಾ ವಲಯಾಧಿಪತಿ ಎಂಬ ಆನ್‌ಲೈನ್ ಕಾರ್ಯಕ್ರಮದಲ್ಲಿ ಸ್ಥಾನ ಪಡೆದುಕೊಂಡಿದ್ದ ಘಟಕಾಧ್ಯಕ್ಷರಾದ ವನಿತ್‌ಕುಮಾರ್ ಅವರು ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಬಹುಮಾನ ಸ್ವೀಕರಿಸಿದರು.

ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಘಟಕದ ಪರವಾಗಿ ಪ್ರಶಸ್ತಿ ಮತ್ತು ಮನ್ನಣೆಗಳನ್ನು ಸ್ವೀಕರಿಸಿದ ಸಂದರ್ಭದಲ್ಲಿ ಘಟಕದ ಸ್ಥಾಪಕಾಧ್ಯಕ್ಷರು ಮತ್ತು ವಲಯ ನಿರ್ದೇಶಕ ರಫೀಕ್ ತೂಚಮಕೇರಿ, ನಿಕಟಪೂರ್ವ ಅಧ್ಯಕ್ಷ ಎ.ಎಸ್. ಟಾಟು ಮೊಣ್ಣಪ್ಪ, ಪೂರ್ವಾಧ್ಯಕ್ಷ ಬಿ.ಈ. ಕಿರಣ್, ಕಾರ್ಯದರ್ಶಿ ಎ.ಪಿ. ದಿನೇಶ್, ಕೋಶಾಧಿಕಾರಿ ಕುಪ್ಪಂಡ ದಿಲನ್ ಬೋಪಣ್ಣ ಸೇರಿದಂತೆ ಘಟಕಾಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.