ಸೋಮವಾರಪೇಟೆ, ಆ. ೪: ಕಳೆದ ಎರಡು ವಾರಗಳಿಂದ ತಾಲೂಕು ಕಚೇರಿಯಲ್ಲಿ ಆರ್.ಟಿ.ಸಿ. ಪ್ರತಿಗಳು ದೊರೆಯದ ಹಿನ್ನೆಲೆ ಕೃಷಿಕರು ಸಮಸ್ಯೆ ಎದುರಿಸುತ್ತಿದ್ದು, ಕೂಡಲೆ ಆರ್‌ಟಿಸಿ ವಿತರಿಸಲು ಕ್ರಮಕೈಗೊಳ್ಳದಿದ್ದರೆ ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರು ಹಾಗು ರೈತರು ಎಚ್ಚರಿಸಿದ್ದಾರೆ.

ಈ ಬಗ್ಗೆ ಶಿರಸ್ತೆದಾರ್ ಮಹೇಶ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಪ್ರಮುಖರು, ಸಾಲ ನವೀಕರಣ, ಕೃಷಿ ಸಾಲ ಪಡೆಯಲು ಹಾಗು ಸರ್ಕಾರದ ವಿವಿಧ ಇಲಾಖೆಗಳಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆರ್.ಟಿ.ಸಿ. ಅವಶ್ಯಕತೆಯಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ವಿಚಾರಿಸಿದರೆ, ರೈತರಿಗೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಕೂಡಲೆ ಆರ್‌ಟಿಸಿ ವಿತರಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಐಗೂರು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಎಸ್. ವಿಶ್ವನಾಥರಾಜೇ ಅರಸ್, ಭುವನಮಂದಾರ ಸಂಘದ ನಿರ್ದೇಶಕ ಮಸಗೋಡು ಲೋಕೇಶ್, ಕೃಷಿಕ ಬಿ.ಈ. ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.