ವೀರಾಜಪೇಟೆ, ಆ. ೩: ಮೂಲಭೂತ ಸೌಕರ್ಯ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳು ಕೂಡಲೇ ಕುಂದುಕೊರತೆ ಸಭೆಯನ್ನು ಕರೆಯುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಹೆಚ್.ಆರ್. ಶಿವಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ತಿತಿಮತಿ ನೊಕ್ಯ ಗ್ರಾಮದ ಚೈನ್ಗೇಟ್ನಿಂದ ದೇವಮಚ್ಚಿಗೆ ಹೋಗುವ ರಸ್ತೆಯ ಬಳಿ ಎರಡು ಎಕರೆ ಸರಕಾರಿ ಜಾಗ ಅತಿಕ್ರಮಗೊಂಡಿದೆ. ಅದನ್ನು ನಿವೇಶನಗಳನ್ನಾಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಹೊಳೆ ಬದಿ ಇರುವ ರುದ್ರಭೂಮಿಗೆ ಹೋಗಲು ದಾರಿ ಹಾಗೂ ಜಾನುವಾರುಗಳಿಗೆ ನೀರು ಕುಡಿಯಲು ಅಡ್ಡಿಯಾಗಿದೆ.
ಬಾಳೆಲೆ ಮತ್ತು ತಿತಿಮತಿಯಲ್ಲಿ ಒಬ್ಬರೆ ಪಶುವೈದ್ಯರಿದ್ದು ಅವರು ಹೆಚ್ಚಿನ ದಿನ ಬಾಳೆಲೆ ಆಸ್ವತ್ರೆಯಲ್ಲಿ ರುತ್ತಾರೆ. ಹೆಚ್ಚು ರಾಸುಗಳನ್ನು ಹೊಂದಿರುವ ತಿತಿಮತಿಯ ಜನರಿಗೆ ಅನಾನೂಕೂಲವಾಗುತ್ತಿದ್ದು, ತಕ್ಷಣ ತಿತಿಮತಿಗೆ ಖಾಯಂ ಪಶುವೈದ್ಯರನ್ನು ನೇಮಿಸುವಂತೆ ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಶಿವಣ್ಣ ಹೇಳಿದರು. ಜಿಲ್ಲಾ ಉಪಾಧ್ಯಕ್ಷ ಹೆಚ್.ಜಿ. ಗೋಪಾಲ್ ಮಾತನಾಡಿ, ಬಿಪಿಎಲ್ ಪಡಿತರದಾರರಿಗೆ ಸೂಕ್ತ ರೀತಿಯ ಪಡಿತರ ವಿತರಣೆ ಹಾಗೂ ಕನಿಷ್ಟ ಮೂರು ಲೀಟರ್ ಸೀಮೆಎಣ್ಣೆ ವಿತರಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ ಎಂದರು. ಸಮಿತಿಯ ತಾಲೂಕು ಸಂಚಾಲಕ ಹೆಚ್.ಪಿ. ಲವ ಮಾತನಾಡಿ, ಕೆದಮುಳ್ಳೂರು ಗ್ರಾ ಪಂನಲ್ಲಿ ಸುಮಾರು ೫೦ ಕುಟುಂಬಗಳು ಹಾಗೂ ಶ್ರೀಮಂಗಲ ಗ್ರಾಮದಲ್ಲಿ ಸುಮಾರು ೨೫ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳು ವಾಸವಾಗಿದ್ದು ಇವರಿಗೆ ಸಭೆ ಸಮಾರಂಭ ನಡೆಸಲು ಅಂಬೇಡ್ಕರ್ ಭವನ ನಿರ್ಮಿಸಲು ಸೂಕ್ತ ಸರಕಾರಿ ಜಾಗ ಗುರುತಿಸಿ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ತಾಲೂಕು ಮಹಿಳಾ ಘಟಕದ ಸಂಚಾಲಕಿ ಸರೋಜ ಮಾತನಾಡಿ ಕಾಫಿ ತೋಟಗಳಲ್ಲಿ ಕೆಲಸ ಹರಸಿ ಜಿಲ್ಲೆಗೆ ಅಸ್ಸಾಂ ಹಾಗೂ ಬಾಂಗ್ಲಾ ದೇಶಿಗರು ಬಂದು ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿರುವುದರಿಂದ ಸ್ಥಳಿಯ ಕಾರ್ಮಿಕರಿಗೆ ಕೆಲಸ ಇಲ್ಲಂತಾಗಿದೆ. ಇವರುಗಳಿಗೆ ತೋಟ ಮಾಲೀಕರು ಸುಳ್ಳು ವಿಳಾಸದ ಆಧಾರ್, ಪಡಿತರ, ಮತದಾರರ ಗುರುತಿನ ಚೀಟಿಗಳನ್ನು ಮಾಡಿಸಿಕೊಡುತ್ತಾರೆ. ವಲಸೆ ಕಾರ್ಮಿಕರು ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಕೊಂಡಿರುವ ಆರೋಪ ಇದೆ. ಇಲ್ಲಿಯ ಖಾಯಂ ನಿವಾಸಿಗಳಿಗೆ ದೊರೆಯದ ಸವಲತ್ತು ಇವರಿಗೆ ಸಿಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಗೋಷ್ಠಿಯಲ್ಲಿ ಗ್ರಾಮ ಆಂತರಿಕ ಶಿಸ್ತು ಸಮಿತಿ ಅಧ್ಯಕ್ಷ ಹೆಚ್.ಕೆ. ಮೋಹನ್, ಖಜಾಂಚಿ ರಮೇಶ್, ಸಂಘಟನಾ ಸಂಚಾಲಕರಾದ ಅನಿಲ್, ಶ್ಯಾಮ್, ನಾಣಯ್ಯ, ಗೌತಮ್, ಗೋಪಿ ಅನಂತು, ಪೃಥ್ವಿ ಉಪಸ್ಥಿತರಿದ್ದರು.