ಪಿ.ಯು.ಸಿ. ಮುಗಿಸಿದ ವಿದ್ಯಾರ್ಥಿಗಳೇ,

ಕರ್ನಾಟಕದ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅವರು ಇತ್ತೀಚೆಗೆ ಕೊಡಗಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳ್ಳುತ್ತಿದ್ದಾರೆ. ರಾಜಕೀಯ ಭವಿಷ್ಯದ ಕಾರಣವೋ, ಸಮಾಜಕ್ಕೆ ನೆರವು ನೀಡುವ ಉದ್ದೇಶವೋ ನನಗೆ ಪ್ರಸ್ತುತವಲ್ಲ. ಆದರೆ ವೈಯಕ್ತಿಕ ಸಂಪಾದನೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಿಲ್ಲೆಯ ಹಲವು ಕಡೆ ಕಿಟ್ ವಿತರಣೆ, ನೀರಿನ ವ್ಯವಸ್ಥೆ, ವೈದ್ಯಕೀಯ ಉಪಕರಣಗಳ ವಿತರಣೆ ಇತ್ಯಾದಿ ಮಾಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಸ್ನೇಹಿತರೊಬ್ಬರು ದೂರವಾಣಿಯಲ್ಲಿ ನನ್ನನ್ನು ಸಂಪರ್ಕಿಸಿದರು. ದಾನಿಯೊಬ್ಬರು ವಿದ್ಯಾರ್ಥಿಗಳಿಗೆ ೩ ವರ್ಷ ವಿದ್ಯಾರ್ಥಿ ವೇತನ ನೀಡಲು ಮುಂದೆ ಬಂದಿದ್ದು ‘ಶಕ್ತಿ’ ಪತ್ರಿಕೆಯ ಮೂಲಕ ವಿದ್ಯಾರ್ಥಿಗಳ ಆಯ್ಕೆ ನಡೆಯಬೇಕು ಹಾಗೂ ಅದಕ್ಕೊಂದು ರೂಪುರೇಷೆ ಸಿದ್ಧಪಡಿಸುವಂತೆ ವಿನಂತಿಸಿದರು.

ನAತರ ಗೊತ್ತಾದದ್ದು ಈ ದಾನಿ ಎ.ಎಸ್. ಪೊನ್ನಣ್ಣ ಎಂಬುದು. ಮೊನ್ನೆ ಪೊನ್ನಣ್ಣ ದೂರವಾಣಿ ಮೂಲಕ ಸಂಪರ್ಕಿಸಿ ಈ ಬಗ್ಗೆ ದೀರ್ಘವಾಗಿ ಚರ್ಚಿಸಿದರು. ತಮ್ಮ ದಿವಂಗತ ತಂದೆ-ತಾಯಿ ಹೆಸರಲ್ಲಿ ಸ್ಥಾಪಿಸಿರುವ ಎ.ಕೆ. ಸುಬ್ಬಯ್ಯ ಪೊನ್ನಮ್ಮ ದತ್ತಿ ಸಂಸ್ಥೆಯ ವತಿಯಿಂದ ಈ ಸ್ಕಾಲರ್‌ಶಿಪ್ ಅನ್ನು ಬಡ ವಿದ್ಯಾರ್ಥಿಗಳಿಗೆ ನೀಡಲು ನಿರ್ಧರಿಸಿದ್ದಾರೆ.

ಅಂತಿಮವಾಗಿ ತೀರ್ಮಾನವಾದಂತೆ ಪಿ.ಯು.ಸಿ. ಉತ್ತೀರ್ಣರಾಗಿ ಪದವಿ ಪ್ರವೇಶ ಮಾಡಲಿರುವ ೨೦ ಹೆಣ್ಣು ಮಕ್ಕಳನ್ನು ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿಗಳು ಜಿಲ್ಲೆಯವರಾಗಿರಬೇಕು; ಜಿಲ್ಲೆಯಲ್ಲೇ ಮುಂದಿನ ವಿದ್ಯಾಭ್ಯಾಸ ಮಾಡಬೇಕು. ಆರ್ಥಿಕವಾಗಿ ಹಿಂದುಳಿದ ಪೋಷಕರ ಮಕ್ಕಳು ಅರ್ಜಿ ಸಲ್ಲಿಸಬಹುದು. ಅರ್ಜಿಯ ಜೊತೆ ಭಾವ ಚಿತ್ರ, ಪಿ.ಯು.ಸಿ. ದಾಖಲಾತಿ, ಮುಂದಿನ ವಿದ್ಯಾಭ್ಯಾಸಕ್ಕೆ ಆಯ್ಕೆ ಮಾಡಿದ ಕಾಲೇಜು ವಿವರ, ಪೋಷಕರ ಆದಾಯ ಪತ್ರದ ಪ್ರತಿ, ಎಲ್ಲವನ್ನೂ ಕಳುಹಿಸಬೇಕು. ಕೊನೆ ದಿನಾಂಕ ೧೮.೦೮.೨೦೨೧. ಆಯ್ಕೆಯಾದವರಿಗೆ ತಾ. ೨೫.೦೮.೨೦೨೧ರ ಒಳಗೆ ಮಾಹಿತಿ ನೀಡಲಾಗುತ್ತದೆ.

ಪ್ರತಿವರ್ಷ ತಲಾ ೧೦ ಸಾವಿರದಂತೆ ವರ್ಷಕ್ಕೆ ೨ ಲಕ್ಷ; ಮುಂದುವರೆದು ಪದವಿಯ ಮೂರು ವರ್ಷ ವಿದ್ಯಾಭ್ಯಾಸದವರೆಗೂ ತಲಾ ೧೦ ಸಾವಿರದಂತೆ ಒಟ್ಟು ೬ ಲಕ್ಷ ರೂಪಾಯಿಯನ್ನು ವಿದ್ಯಾರ್ಥಿ ವೇತನಕ್ಕಾಗಿ ಪೊನ್ನಣ್ಣ ಅವರು ಮೀಸಲಿಡುತ್ತಿದ್ದಾರೆ. ಆಗಸ್ಟ್ ೨೭ ರಂದು ಫಲಾನುಭವಿಗಳಿಗೆ ವೀರಾಜಪೇಟೆಯಲ್ಲಿ ವಿದ್ಯಾರ್ಥಿ ವೇತನದ ಮೊದಲ ಕಂತನ್ನು ವಿತರಿಸುವುದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೂ ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

ಪೊನ್ನಣ್ಣ ಅವರ ಚಿಂತನೆಗೆ ನಮ್ಮ ಅಭಿನಂದನೆ.

ವಿದ್ಯಾರ್ಥಿಗಳಿಗೆ ಶುಭಕಾಮನೆ.

ಅರ್ಜಿ ಕಳುಹಿಸಬೇಕಾದ ವಿಳಾಸ : ಆಡಳಿತಾಧಿಕಾರಿ, ಶಕ್ತಿ ದಿನಪತ್ರಿಕೆ, ಕೈಗಾರಿಕಾ ಬಡಾವಣೆ, ಮಡಿಕೇರಿ.

ಇಮೇಲ್ ವಿಳಾಸ : shಚಿಞಣhiಜಚಿiಟಥಿ@ gmಚಿiಟ.ಛಿom

ಜಿ. ಚಿದ್ವಿಲಾಸ್

ಸಂಪಾದಕ