ನಾಪೋಕ್ಲು, ಆ. ೩: ಸ್ಥಳೀಯ ಮಾರುಕಟ್ಟೆ ಬಳಿ ಗ್ರಾಮ ಪಂಚಾಯಿತಿ ವತಿಯಿಂದ ಸಂಗ್ರಹಿಸಲಾಗುವ ತ್ಯಾಜ್ಯವನ್ನು ರಾಶಿ ಹಾಕಲಾಗಿದೆ. ಇದರಿಂದ ಈ ಪ್ರದೇಶ ದುರ್ವಾಸನೆ ಯಿಂದ ಕೂಡಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ. ಗ್ರಾಮ ಪಂಚಾಯಿತಿ ಕೂಡಲೇ ಈ ತ್ಯಾಜ್ಯದ ರಾಶಿಯನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಾಪೋಕ್ಲು ವ್ಯಾಪ್ತಿಯಲ್ಲಿ ಈ ಹಿಂದೆ ಕೊರೊನಾ ಅಟ್ಟಹಾಸ ಮೆರೆದಿತ್ತು. ಈಗಲೂ ಅದು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದಲೇ ಜನ ಕಂಗೆಟ್ಟಿದ್ದಾರೆ. ತ್ಯಾಜ್ಯದ ರಾಶಿಯಿಂದ ಬೇರೆ ಬೇರೆ ತರದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಜನವಲಯದಲ್ಲಿ ಉಂಟಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಕೂಡಲೇ ಕಸದ ರಾಶಿಯನ್ನು ತೆರವುಗೊಳಿಸು ವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಾಪೋಕ್ಲು ಕಸ ವಿಂಗಡಣಾ ಘಟಕದ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಿರುವ ಹಿನ್ನೆಲೆಯಲ್ಲಿ ಎರಡು ದಿನದ ಕಸವನ್ನು ನಾಪೋಕ್ಲು ಮಾರುಕಟ್ಟೆ ಬಳಿ ಸಂಗ್ರಹಿಸಿ ಇಡಲಾಗಿತ್ತು. ಅದಕ್ಕೆ ಬಯೋಡೈಜೆಸ್ಟರ್ ಹಾಕಿ ಟಾರ್ಪಲ್ ಮುಚ್ಚಲಾಗಿತ್ತು. ಮುಚ್ಚಲಾದ ಟಾರ್ಪಲ್ ಅನ್ನು ರಾತ್ರಿ ಯಾರೋ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಈಗ ಕಸವನ್ನು ಅಲ್ಲಿಂದ ಸ್ಥಳಾಂತರಿಸಲಾಗುತ್ತಿದೆ. ಜನ ಆತಂಕಪಡುವ ಅಗತ್ಯ ಇಲ್ಲ ಎಂದು ನಾಪೋಕ್ಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ‘ಶಕ್ತಿ’ಗೆ ತಿಳಿಸಿದ್ದಾರೆ.
- ಪಿ.ವಿ. ಪ್ರಭಾಕರ್