ಮಡಿಕೇರಿ ಆ.೩: ಮುಂದಿನ ಮಳೆಗಾಲಕ್ಕೆ ಮುನ್ನ ಭಾಗಮಂಡಲ ಮೇಲ್ಸೇತುವೆ ಕಾರ್ಯವನ್ನು ಪೂರ್ಣಗೊಳಿಸಲಿರುವದಾಗಿ ನೀರಾವರಿ ಇಲಾಖಾ ಸಹಾಯಕ ಅಭಿಯಂತರ ಖಲೀಂ ‘ಶಕ್ತಿ’ ಗೆ ಮಾಹಿತಿಯಿತ್ತಿದ್ದಾರೆ.

ಭಾಗಮಂಡಲದಲ್ಲಿ ನಡೆದಾಡಲೂ ಸಾಧ್ಯವಾಗದಷ್ಟು ಹಾಗೂ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿರುವ ಕೆಸರು ತುಂಬಲು ಕಾರಣವಾದ ಸೇತುವೆ ಕೆಲಸದ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆ ‘ಶಕ್ತಿ’ ಅವರನ್ನು ಪ್ರಶ್ನಿಸಿದಾಗ ಅವರು ಈ ಕೆಳಗಿನಂತೆ ಪ್ರತಿಕ್ರಿಯಿಸಿದರು,

‘೨೦೧೮ ರಲ್ಲಿ ಪ್ರಾರಂಭಗೊAಡ ಮೇಲ್ಸೇತುವೆ ಯೋಜನೆ ಈಗಾಗಲೇ ಮುಕ್ತಾಯಗೊಳ್ಳಬೇಕಿತ್ತು. ಆದರೆ, ಈ ಯೋಜನೆಗೆ ಅಗತ್ಯವಾದ ಭೂಮಿಯನ್ನು ಸ್ವಾಧೀನಪಡಿಸಿ ಕೊಳ್ಳಲು ಹಲವಾರು ಕಾನೂನಾತ್ಮಕ ಅಡ್ಡಿ ಆತಂಕಗಳು, ಅಗತ್ಯ ದಾಖಲೆಗಳ ಸಮಸ್ಯೆ ತಲೆದೋರಿ ವಿಳಂಬಗೊAಡಿತು. ಈಗ ಭೂಸ್ವಾಧೀನ ಪ್ರಕ್ರಿಯೆಗಳೆಲ್ಲ ಮುಗಿದಿದೆ.

(ಮೊದಲ ಪುಟದಿಂದ) ಇದಕ್ಕೋಸ್ಕರ ಮೈಸೂರಿನಲ್ಲಿ ಪ್ರತ್ಯೇಕ ವಿಭಾಗದ ಅಧಿಕಾರಿಗಳಿದ್ದು ಈಗ ಎಲ್ಲವನ್ನೂ ಸಮರ್ಪಕಗೊಳಿಸಿದ್ದಾರೆ. ಈ ನಡುವೆ ತೀವ್ರ ಮಳೆಯಿಂದಲೂ ಕಾಮಗಾರಿ ವಿಳಂಬಗೊಳ್ಳುವAತಾಯಿತು. ಅನೇಕ ಕಡೆ ಇಳಿಜಾರು ಪ್ರದೇಶಗಳಿದ್ದು ಮಣ್ಣು ಅಥವಾ ಜಲ್ಲಿ ಮಿಶ್ರಣವನ್ನು ಹಾಕುತ್ತಿದ್ದಂತೆ ಜಾರಿ ಹೋಗುತ್ತಿದ್ದುದರಿಂದ ಕಷ್ಟ ಸಾಧ್ಯವಾಯಿತು. ಅಂತಹ ಕಡೆ ಮಳೆ ಮುಗಿದೊಡನೆ ನೆಲವನ್ನು ಕಾಂಕ್ರೀಟೀಕರಣಗೊಳಿಸಿ ಕೆಲಸವನ್ನು ಮುಂದುವರಿಸಲಾಗುತ್ತದೆ. ಅಡಿಪಾಯದ ಕೆಲಸಗಳ ಬಹುಪಾಲು ಮುಕ್ತಾಯದ ಹಂತದಲ್ಲಿದ್ದು ಮುಂದೆ ಮೇಲ್ಭಾಗದ ಕೆಲಸವನ್ನು ತ್ವರಿತÀ ಗತಿಯಲ್ಲಿ ನಡೆಸಲಾಗುತ್ತದೆ. ಅಂತೂ ಮುಂದಿನ ಜುಲೈ ತಿಂಗಳಿಗೂ ಮುನ್ನ ಮೇಲ್ಸೇತುವೆ ನಿರ್ಮಾಣ ಪೂರ್ಣಗೊಳ್ಳಲಿದೆ’ ಎಂದು ಖಲೀಂ ಭರವಸೆಯಿತ್ತರು.