ವೀರಾಜಪೇಟೆ, ಆ. ೩: ಬಡ ಕಾರ್ಮಿಕರು ಅಸಂಘಟಿತ ಕಾರ್ಮಿಕ ವಲಯ, ಮತ್ತು ವಿಶೇಷಚೇತನರು ಕೋವಿಡ್ ಸಮಯದಲ್ಲಿ ಆರ್ಥಿಕವಾಗಿ ಬಳಲುತ್ತಿದ್ದು ಮಾನವೀಯ ನೆಲೆಯಲ್ಲಿ ನೆರವು ನೀಡುವುದು ಧರ್ಮವಾಗಿದೆ. ಬಡ ಕುಟುಂಬಗಳಿಗೆ ತಿಂಗಳಿಗಾಗುವ ಅಗತ್ಯ ವಸ್ತುಗಳನ್ನು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ವಿತರಿಸಲಾಗುತ್ತಿದೆ ಎಂದು ಕೆ.ಪಿ.ಸಿ.ಸಿ ಕಾನೂನು ಘಟಕದ ರಾಜ್ಯಧ್ಯಕ್ಷ, ವಕೀಲ ಎ.ಎಸ್. ಪೊನ್ನಣ್ಣ ಅವರು ಹೇಳಿದರು.
ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು, ಚೆಂಬೆಬೆಳ್ಳೂರು, ಬೇಟೋಳಿ, ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿಶೇಷ ಚೇತನರಿಗೆ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಸೇವೆ ಮಾಡಲು ಮನೋಬಲ ಮುಖ್ಯ. ರಾಜಕೀಯ ಬೇರೆ ಆಡಳಿತ ನಡೆಸುವುದು ಬೇರೆ. ಸತತ ಎರಡು ವರ್ಷಗಳಿಂದ ಜನಸಾಮಾನ್ಯರು ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.
ಕಳೆದ ಸಾಲಿನಲ್ಲಿ ಎಂಟು ಸಾವಿರ ಕಿಟ್ ವಿತರಿಸಲಾಗಿದೆ. ಅದೇ ರೀತಿಯಲ್ಲಿ ಪ್ರಸ್ತುತ ಸಾಲಿನಲ್ಲೂ ಸೇವಾ ಕಾರ್ಯ ಮುಂದುವರಿಸಲಾಗಿದೆ. ಕಿಟ್ ವಿತರಣೆ ಅಲ್ಲದೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪೊಷಕರ ದತ್ತಿನಿಧಿಯ ಮೂಲಕ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಮುಂದೆಯು ಸಮಾಜಮುಖಿ ಕಾರ್ಯ ಕ್ರಮಗಳನ್ನು ಜನತೆಗೆ ನೀಡುವುದಾಗಿ ತಿಳಿಸಿದರು. ಕಾನೂನು ಘಟಕದ ಬೇಟೋಳಿಯ ವಲಯ ಅಧ್ಯಕ್ಷ ವರ್ಗಿಸ್, ಕೆದಮುಳ್ಳೂರು ವಲಯ ಅಧ್ಯಕ್ಷ ಮಹೇಶ್, ಕಾಕೋಟುಪರಂಬು ವಲಯ ಅಧ್ಯಕ್ಷ ಮಂಡೇಟಿರ ಅನಿಲ್, ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಘು ಸುಬ್ಬಯ್ಯ ಅವರುಗಳ ಹಾಜರಾತಿಯಲ್ಲಿ ಸುಮಾರು ೩೦೦ ಕ್ಕೂ ಅಧಿಕ ಮಂದಿ ಫಲಾನುಭವಿಗಳಿಗೆ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.
ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ಧರ್ಮಜಾ ಉತ್ತಪ್ಪ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷÀ ನವೀನ್, ಜಿಲ್ಲಾ ಕಾನೂನು ಮಹಿಳಾ ಘಟಕದ ಅಧ್ಯಕ್ಷೆ ಕುಸುಮ, ಪಟ್ಟಣ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ರಾಫಿ, ರಾಜೇಶ್ ಪದ್ಮನಾಭ, ಸೇವಾ ದಳದ ಪ್ರಮುಖರಾದ ತೆರೆಜಾ ವಿಕ್ಟರ್, ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.