ಮಡಿಕೇರಿ, ಆ. ೩: ಕೊರೊನಾ ಹಿನ್ನೆಲೆ ಪರೀಕ್ಷೆಯೇ ಇಲ್ಲದೆ, ಹತ್ತನೇ ತರಗತಿ ಹಾಗೂ ಮೊದಲನೆಯ ಪಿ.ಯು.ಸಿ ಅಂಕಗಳ ಆಧಾರದ ಮೇಲೆ ಜುಲೈ ೨೧ ರಂದು ರಾಜ್ಯ ಸರಕಾರ ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟಿಸಿತು. ರಾಜ್ಯಾದ್ಯಂತ ಯಾರೂ ಕೂಡ ಅನುತ್ತೀರ್ಣರಾಗದಂತೆ ಸರಕಾರವು ಫಲಿತಾಂಶವನ್ನು ನೀಡಿತ್ತು. ಪ್ರತಿ ವರ್ಷ ರಾಜ್ಯದಲ್ಲಿ ೩ ರಿಂದ ೬ ವಿದ್ಯಾರ್ಥಿಗಳು ೬೦೦ಕ್ಕೆ ೬೦೦ ಅಂಕಗಳನ್ನು ಪಡೆಯುತ್ತಿದ್ದರು. ಆದರೆ ಈ ಬಾರಿ ೨,೨೩೯ ವಿದ್ಯಾರ್ಥಿಗಳು ಶೇ.೧೦೦ ಪಡೆಯುವುದರ ಮೂಲಕ ಭರ್ಜರಿ ಫಲಿತಾಂಶ ಪಡೆದುಕೊಂಡರು. ಈ ಪೈಕಿ ಜಿಲ್ಲೆಯ ೪ ಮಂದಿಯೂ ಸೇರಿಕೊಂಡಿದ್ದಾರೆ.
ಬಹುತೇಕ ಮಂದಿಗೆ ಫಲಿತಾಂಶ ಹರ್ಷ ನೀಡಿದ್ದರೆ, ರಾಜ್ಯದ ಒಟ್ಟು ೯೬೫ ವಿದ್ಯಾರ್ಥಿಗಳು ತಮಗೆ ನೀಡಿರುವ ಫಲಿತಾಂಶವನ್ನು ತಿರಸ್ಕರಿಸಿದ್ದು ಮತ್ತಷ್ಟು ಹೆಚ್ಚು ಅಂಕ ಪಡೆಯುವ ನಿಟ್ಟಿನಲ್ಲಿ ಪರೀಕ್ಷೆ ಎದುರಿಸಲು ನಿರ್ಧರಿಸಿದ್ದಾರೆ.
(ಮೊದಲ ಪುಟದಿಂದ) ಈ ಪೈಕಿ ಜಿಲ್ಲೆಯ ಒಟ್ಟು ೭ ವಿದ್ಯಾರ್ಥಿಗಳಿದ್ದಾರೆ. ೬ ಬಾಲಕಿಯರು ಹಾಗೂ ಒಬ್ಬ ಬಾಲಕ ಪರೀಕ್ಷೆ ಬರೆಯಲಿದ್ದಾರೆ. ೭ ವಿದ್ಯಾರ್ಥಿಗಳಲ್ಲಿ ಕಲಾ ವಿಭಾಗದ ೪, ವಿಜ್ಞಾನದಿಂದ ಒಬ್ಬರು ಹಾಗೂ ವಾಣಿಜ್ಯ ವಿಭಾಗದಿಂದ ಇಬ್ಬರು ಆಗಸ್ಟ್ ೧೯ ರಿಂದ ಸೆಪ್ಟೆಂಬರ್ ೩ ರವರೆಗೆ ನಡೆಯಲಿರುವ ಪರೀಕ್ಷೆ ಬರೆಯಲಿದ್ದಾರೆ. ಕೆಲವರು ಎಲ್ಲಾ ವಿಷಯಗಳ ಪರೀಕ್ಷೆಯನ್ನು ಬರೆಯಲು ಇಚ್ಚಿಸಿದರೆ, ಮತ್ತೆ ಕೆಲವರು ಕೆಲ ವಿಷಯಗಳಲ್ಲಿ ಮಾತ್ರ ಪರೀಕ್ಷೆ ಎದುರಿಸಲು ನೋಂದಾಯಿಸಿಕೊAಡಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿದೇರ್ಶಕ ವಿಷ್ಣು ಮೂರ್ತಿ ಅವರು ಮಾಹಿತಿ ನೀಡಿದ್ದಾರೆ. ಇಲಾಖೆಯಿಂದ ಮಾರ್ಗಸೂಚಿ ಬಂದ ನಂತರ ಪರೀಕ್ಷಾ ಕೇಂದ್ರಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದಾಗಿ ಅವರು ತಿಳಿಸಿದ್ದಾರೆ.