ಭಾಗಮಂಡಲ, ಆ. ೨: ಭಾಗಮಂಡಲದಲ್ಲಿ ಮೇಲ್ಸೇತುವೆ ಕಾಮಗಾರಿಯಿಂದ ಪಟ್ಟಣದ ಸುಮಾರು ಒಂದೂವರೆ ಕಿ.ಮೀ. ರಸ್ತೆ ಕೆಸರು ಮಯವಾಗಿದ್ದು, ಸಾರ್ವಜನಿಕರ ಹಾಗೂ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಹಿನ್ನೆಲೆ ರಸ್ತೆ ದುರಸ್ತಿಗೆ ಬಿಜೆಪಿ ಸ್ಥಾನೀಯ ಸಮಿತಿ ಯುವ ಮೋರ್ಚಾ ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದು, ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.

ಭಾಗಮಂಡಲದ ಲಕ್ಕಿಸ್ಟಾರ್ ಬಳಿಯಿಂದ ತಲಕಾವೇರಿಗೆ ಹೋಗುವ ರಸ್ತೆಯ ಮಾರ್ಕೆಟ್ ತನಕದ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಅಧಿಕಾರಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ. ಒಂದು ವಾರದ ಒಳಗೆ ಸಮಸ್ಯೆ ಸರಿಪಡಿಸದಿದ್ದಲ್ಲಿ ರಸ್ತೆಯಲ್ಲಿ ನಾಟಿ ಮಾಡಿ ಸಾಂಕೇತಿಕವಾಗಿ ರಸ್ತೆ ತಡೆದು ಪ್ರತಿಭಟಿಸಲಾಗುವುದು ಎಂದು ಯುವ ಮೋರ್ಚಾ ಹಾಗೂ ಸಾರ್ವಜನಿಕರು ತಿಳಿಸಿದ್ದಾರೆ.

ಮೇಲ್ಸೇತುವೆ ಕಾಮಗಾರಿ ಯಿಂದಾಗಿ ಅಂಗಡಿ ಮಳಿಗೆಗಳ ಎದುರು ಕೆಸರು ಸಂಗ್ರಹವಾಗಿದೆ. ಗ್ರಾಹಕರು ಸಾಮಗ್ರಿ ಖರೀದಿಸಲು ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ. ಮಾರ್ಕೆಟ್ ಬಳಿಯಿಂದ ಬರುವ ಚರಂಡಿ ನೀರು ಅಂಗಡಿಯ ಮುಂಭಾಗದಲ್ಲಿ ಹರಿಯುತ್ತಿದೆ. ದ್ವಿಚಕ್ರ ವಾಹನ ಸವಾರರು ಸಂಚರಿಸಲಾಗದೆ ಅಪಘಾತವಾದ ಘಟನೆ ನಡೆದಿದೆ. ಗುತ್ತಿಗೆದಾರರ ನಿರ್ಲಕ್ಷö್ಯವೇ ಈ ಅನಾಹುತಗಳಿಗೆ ಕಾರಣ ಎಂದು ನಾಗರಿಕರು ಆರೋಪಿಸಿದ್ದಾರೆ.

ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಮಿತ ಅವರಿಗೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಪಿ.ಎಂ. ರಾಜೀವ್, ತಾಲೂಕು ಯುವ ಮೋರ್ಚಾ ಉಪಾಧ್ಯಕ್ಷ ವಿನೋದ್ ಕೆದಕ್ಕಾರ್, ಸ್ಥಳೀಯರಾದ ಮನೋಜ್, ಪೂಣಚ್ಚ, ಮಿಟ್ಟು ರಂಜಿತ್, ಮನವಿ ಯನ್ನು ಸಲ್ಲಿಸಿದ್ದು, ಒಂದುವಾರದ ಒಳಗೆ ರಸ್ತೆ ಸರಿಪಡಿಸದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.