ಮಡಿಕೇರಿ, ಆ. ೨: ಇತ್ತೀಚೆಗೆ ಮಡಿಕೇರಿಯಲ್ಲಿ ಓರ್ವ ಸೈನಿಕ ಮತ್ತು ಅವರ ಕುಟುಂಬದ ಮೇಲೆ ಕೆಲವರು ದಾಳಿ ಮಾಡಿರುವುದು ಅತ್ಯಂತ ಗಂಭೀರವಾದ ಘಟನೆಯಾಗಿದ್ದು, ಈ ಘಟನೆಯನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ರಾಜ್ಯ ವಕ್ತಾರ ಮೋಹನ್ ಗೌಡ ಹೇಳಿಕೆ ನೀಡಿದ್ದಾರೆ.

ಕುಶಾಲನಗರ ಕೊಡವ ಸಮಾಜ

* ಇತ್ತೀಚೆಗೆ ಯೋಧನ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಕುಶಾಲನಗರ ಕೊಡವ ಸಮಾಜ ಖಂಡಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಸಮಾಜದ ಅಧ್ಯಕ್ಷ ಎಂ ಬಿ ಮೊಣ್ಣಪ್ಪ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಸೋಮವಾರಪೇಟೆ ಕೊಡವ ಸಮಾಜ

* ಮಡಿಕೇರಿ ಸಮೀಪದ ಬೋಯಿಕೇರಿಯಲ್ಲಿ ನಡೆದ ಸೈನಿಕ ಕುಟುಂಬದ ಮೇಲಿನ ಹಲ್ಲೆ ಖಂಡನೀಯ ಎಂದು ಸೋಮವಾರಪೇಟೆ ಕೊಡವ ಸಮಾಜ ಅಸಮಾಧಾನ ವ್ಯಕ್ತಪಡಿಸಿದೆ. ಸೈನಿಕ ಮೊಣ್ಣಂಗೇರಿಯ ಅಶೋಕ್‌ಕುಮಾರ್ ಅವರ ಮೇಲೆ ಹಲ್ಲೆ ನಡೆಸಿರುವ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಮಾಜದ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಹಾಗೂ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.