ನಾಪೋಕ್ಲು, ಆ. ೨: ಕಕ್ಕಬ್ಬೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ನಾಲಡಿ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಹೆಚ್ಚಾಗುತ್ತಿದ್ದು, ಈ ವ್ಯಾಪ್ತಿಯ ಬೆಳೆಗಾರರ ಕಾಫಿ, ಬಾಳೆ, ಅಡಿಕೆ, ತೆಂಗು ಬೆಳೆಗಳನ್ನು ಕಾಡಾನೆಗಳು ಸಂಪೂರ್ಣವಾಗಿ ನಾಶಗೊಳಿಸಿವೆ.

ಗ್ರಾಮದ ಅಲ್ಲಾರಂಡ ಸನ್ನು ಅಯ್ಯಪ್ಪ, ಬೋಪಣ್ಣ, ನಾಣಯ್ಯ, ಪರದಂಡ ಗಿರೀಶ್, ಸದಾ ನಾಣಯ್ಯ, ಅರ್ಜುನ್, ಬೊಳಿಯಾಡಿರ ಕಾರ್ಯಪ್ಪ, ವಿಜಯ, ಡಾಲಿ, ಕೋಡಿಮಣಿಯಂಡ ಬೋಪಣ್ಣ, ಪೊನ್ನಣ್ಣ ಸೇರಿದಂತೆ ಹಲವು ಬೆಳೆಗಾರರ ಕೃಷಿಯನ್ನು ಕಾಡಾನೆಗಳು ಪ್ರತಿ ನಿತ್ಯ ಧ್ವಂಸಗೊಳಿಸುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೆ ಸ್ಥಳಕ್ಕೆ ಆಗಮಿಸುವ ಅರಣ್ಯ ಇಲಾಖಾ ಸಿಬ್ಬಂದಿಗಳು ಬೆಳೆ ನಷ್ಟದ ಅಂದಾಜು ಮಾಡಿ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸುತ್ತಾರೆ. ಆದರೆ, ಪ್ರತಿ ನಿತ್ಯ ಕಾಡಾನೆ ಧಾಳಿಯಿಂದ ನಷ್ಟ ಸಂಭವಿಸುವ ಬಗ್ಗೆ ಪರಿಹಾರ ಕೋರಿ ಯಾರಿಗೆ ಅರ್ಜಿ ಸಲ್ಲಿಸುವದು ಎಂದು ಪ್ರಶ್ನಿಸಿರುವ ಜನ ಕಾಡಾನೆಗಳನ್ನು ಶಾಶ್ವತವಾಗಿ ಸ್ಥಳಾಂತರಿಸುವ ಮೂಲಕ ನಮಗೆ ಪರಿಹಾರ ನೀಡಬೇಕು ಎಂದು ಸರಕಾರ ಮತ್ತು ಅರಣ್ಯ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. -ಪಿ.ವಿ.ಪ್ರಭಾಕರ್