ಸೋಮವಾರಪೇಟೆ, ಆ. ೨: ಜಿಲ್ಲೆಯಲ್ಲಿ ಬಿಳಿ ಫಲಕ ಹೊಂದಿರುವ ಹಲವಷ್ಟು ವಾಹನಗಳು ಬಾಡಿಗೆ ಮಾಡುತ್ತಿದ್ದು, ಇವುಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಆರ್ಟಿಓ ಕಚೇರಿ ಎದುರು ತೀವ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ಟ್ಯಾಕ್ಸಿ ಡ್ರೆöÊರ್ಸ್ ಅಸೋಸಿಯೇಷನ್ನ (ಕೆಟಿಡಿಓ) ಜಿಲ್ಲಾಧ್ಯಕ್ಷ ವಿನ್ಸೆಂಟ್ ಬಾಬು ಹೇಳಿದರು.
ಕೆಟಿಡಿಓ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸ ಲಾಗಿದ್ದ ನೂತನ ಸಮಿತಿ ರಚನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಂತ ಬಳಕೆಯ ಉದ್ದೇಶಕ್ಕೆ ಖರೀದಿಸಿರುವ ವಾಹನಗಳಲ್ಲಿ ಕೆಲವರು ಬಾಡಿಗೆ ಮಾಡುತ್ತಿರುವುದರಿಂದ, ಕಾನೂನು ಬದ್ಧವಾಗಿ ಸರ್ಕಾರಕ್ಕೆ ಕಾಲಕಾಲಕ್ಕೆ ತೆರಿಗೆ ಪಾವತಿಸಿ ಬಾಡಿಗೆ ಮಾಡುತ್ತಿರುವ ಹಳದಿ ಫಲಕದ ವಾಹನಗಳಿಗೆ ಅನ್ಯಾಯವಾಗುತ್ತಿದೆ. ಇದರ ವಿರುದ್ಧ ಎಲ್ಲಾ ಚಾಲಕರು ಸಂಘಟನಾತ್ಮಕವಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಬಾಡಿಗೆ ಮಾಡುವ ಅನಿವಾರ್ಯತೆ ಇದ್ದಲ್ಲಿ ಅವರೂ ಸಹ ತಮ್ಮ ವಾಹನಗಳನ್ನು ಹಳದಿ ಬಣ್ಣದ ಫಲಕಕ್ಕೆ ಬದಲಾಯಿಸಿ ಕೊಳ್ಳಲಿ. ಕಾನೂನು ಬಾಹಿರವಾಗಿ ಬಾಡಿಗೆ ಮಾಡುವುದು ಬೇಡ. ಹಳದಿ ಫಲಕ ಹೊಂದಿರುವ ವಾಹನಗಳು ವಾರ್ಷಿಕ ೩೬ ಸಾವಿರಕ್ಕೂ ಅಧಿಕ ತೆರಿಗೆ ಹಾಗೂ ವಿಮೆ ಪಾವತಿಸು ತ್ತಿದ್ದು, ಬಿಳಿ ಫಲಕದ ವಾಹನಗಳು ವಾರ್ಷಿಕ ೩ ರಿಂದ ೪ ಸಾವಿರ ವಿಮೆ ಮಾತ್ರ ಪಾವತಿಸಿ ಬಾಡಿಗೆ ಮಾಡುತ್ತಿದ್ದಾರೆ. ಇದರಿಂದಾಗಿ ನ್ಯಾಯೋಚಿತವಾಗಿ ಬದುಕು ಸಾಗಿಸುತ್ತಿರುವ ಚಾಲಕರಿಗೆ ಅನ್ಯಾಯವಾಗುತ್ತಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ಕುಮಾರ್ ಮಾತನಾಡಿ, ಟ್ಯಾಕ್ಸಿ ಚಾಲಕರು ಹಲವಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೊರೊನಾ ಹಿನ್ನೆಲೆ ಇನ್ನಷ್ಟು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರುಗಳ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು. ತಮ್ಮ ಸಮಸ್ಯೆಗಳ ಬಗ್ಗೆ ಸಂಘಟಿತ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಬೇಕೆಂದು ಸಲಹೆ ನೀಡಿದರು.
ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್. ಮೋಹನ್ ಮಾತನಾಡಿ, ಆಟೋ ಗಳಿಗೆ ಕೇವಲ ೧೫ ಕಿ.ಮೀ. ಮಾತ್ರ ಬಾಡಿಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಇಂತಹ ಸನ್ನಿವೇಶ ದಲ್ಲೂ ಬಿಳಿ ಫಲಕದ ವಾಹನಗಳು ಬಾಡಿಗೆ ತೆರಳಿದರೆ ಆಟೋ ಚಾಲಕರ ಬದುಕು ಇನ್ನಷ್ಟು ದುಸ್ತರವಾಗಲಿದೆ. ಬಿಳಿ ಫಲಕದ ವಾಹನಗಳು ಬಾಡಿಗೆ ತೆರಳದಂತೆ ಕ್ರಮವಹಿಸಲು ಆಗ್ರಹಿಸಿ ಹಲವಷ್ಟು ಬಾರಿ ಸಂಘದ ವತಿಯಿಂದ ಆಗ್ರಹಿಸಲಾಗಿದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದರು. ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ಕಿರಣ್ ಪ್ರಾಸ್ತವಿಕವಾಗಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ರಖೀಬ್, ಉಪಾಧ್ಯಕ್ಷ ಪರಶುರಾಮ್ ಉಪಸ್ಥಿತರಿದ್ದರು. ಇದೇ ಸಂದರ್ಭ ನೂತನವಾಗಿ ಸೋಮವಾರಪೇಟೆ ತಾಲೂಕು ಕೆಟಿಡಿಓ ಸಂಘವನ್ನು ಅಸ್ತಿತ್ವಕ್ಕೆ ತಂದು ಪದಾಧಿಕಾರಿಗಳನ್ನು ನೇಮಿಸಲಾಯಿತು. ಸಂಘದ ಪದಾಧಿಕಾರಿ ಕೆ.ಎನ್. ದೀಪಕ್ ಕಾರ್ಯಕ್ರಮ ನಿರ್ವಹಿಸಿದರು.