ಶನಿವಾರಸಂತೆ, ಜು. ೩೧: ಶನಿವಾರಸಂತೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಅಧ್ಯಕ್ಷೆ ಸರೋಜ ಶೇಖರ್ ವಹಿಸಿದ್ದರು.

ಗ್ರಾ.ಪಂ. ಆಡಳಿತದಲ್ಲಿ ಸದಸ್ಯೆಯೊಬ್ಬರ ಪತಿ ಹಸ್ತಕ್ಷೇಪ ಮಾಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಭೆಯಿಂದ ಸದಸ್ಯರೊಬ್ಬರು ಹೊರ ನಡೆದಾಗಲೂ ಕನಿಷ್ಟ ಸಭೆಯ ನಿಯಮದ ಬಗ್ಗೆ ಅರಿವಿಲ್ಲದೆ ಸಭೆ ಮುಂದುವರಿಸಿದ್ದ ಅಧ್ಯಕ್ಷರ ವಿರುದ್ಧ ಸದಸ್ಯ ಎಸ್.ಎನ್. ರಘು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಶನಿವಾರಸಂತೆ ಪಂಚಾಯಿತಿ ಯಲ್ಲಿ ೩ ಕಸ ವಿಲೇವಾರಿ ಯಂತ್ರಗಳಿದ್ದರೂ ಕಾನೂನು ಗಾಳಿಗೆ ತೂರಿ ಯಾವುದೇ ಕಾನೂನಿನ ಅಂಶಗಳನ್ನು ಪಾಲಿಸದೇ ಸುಮಾರು ೧ ಲಕ್ಷ ರೂಪಾಯಿಗಳು ಕಸ ವಿಲೇವಾರಿಗೆ ಸೇರಿಸಿ ರೂ. ೫೪,೦೦೦ ಬಿಲ್ಲು ಪಾಸು ಮಾಡಿರುವುದಕ್ಕೆ ಸರ್ದಾರ್ ಅಹ್ಮದ್, ಆದಿತ್ಯ ಗೌಡ, ಎಸ್.ಎನ್. ರಘು ಅವರುಗಳು ಆಕ್ಷೇಪ ವ್ಯಕ್ತಪಡಿಸಿದರು. ಶನಿವಾರಸಂತೆ ಗುಂಡೂರಾವ್ ಬಡಾವಣೆಯಲ್ಲಿ ಈ ಸಲ ಒಂದೇ ಒಂದು ಅಭಿವೃದ್ಧಿ ಕೆಲಸ ಆಗಿಲ್ಲ. ಅದರ ಬಗ್ಗೆ ಚರ್ಚೆಯನ್ನು ಮಾಡುತ್ತಿಲ್ಲ. ಅಭಿವೃದ್ಧಿ ಕೆಲಸದತ್ತ ನಿಮ್ಮ ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ. ಆದರೆ ಜನರಿಗೆ ಏನು ಉತ್ತರ ಕೊಡುವುದೆಂದು ಸದಸ್ಯ ಸರ್ದಾರ್ ಅಧ್ಯಕ್ಷರನ್ನು ಪ್ರಶ್ನಿಸಿದರು. ಮುಂದುವರೆದು ಗುಂಡೂರಾವ್ ಬಡಾವಣೆಯಲ್ಲಿ ಡೆಂಗ್ಯೂ ಅಂತಹ ಪ್ರಕರಣಗಳು ಕಂಡು ಬಂದಿದ್ದು, ಇದಕ್ಕೆ ಪಂಚಾಯಿತಿಯೇ ನೇರ ಹೊಣೆ ಎಂದು ಆರೋಪಿಸಿದರು. ಚರಂಡಿಗಳಲ್ಲಿ ಹೂಳು ತುಂಬಿದ್ದು ಮನೆಗಳ ಮುಂದೆ ನೀರು ನಿಲ್ಲುತ್ತಿದೆ. ಇದರಿಂದ ರೋಗ ಹರಡುತ್ತಿದೆ. ಇಲ್ಲಿಯ ಕೆರೆ ಹೂಳು ತೆಗೆಯಬೇಕು ಎಂದು ಮೊದಲ ಸಾಮಾನ್ಯ ಸಭೆಯಲ್ಲಿ ಗಮನಸೆಳೆದಿದ್ದು, ಇದುವರೆಗೂ ಆ ಕೆಲಸವೂ ಆಗದಿರುವುದು ವಿಷಾಧನೀಯ ಎಂದರು. ಸದಸ್ಯ ರಘು ಮಾತನಾಡಿ, ಶನಿವಾರಸಂತೆ ಗ್ರಾಮ ಪಂಚಾಯಿತಿಯ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ಪಂಚಾಯಿತಿ ನಿಷ್ಕಿçಯಗೊಂಡಿದೆ ಎಂದರು. ಕಸ ವಿಲೇವಾರಿ ಘಟಕದ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿಯವರ ಬಳಿ ಪ್ರಸ್ತಾಪ ಮಾಡುವ ಬಗ್ಗೆ ಕಳೆದ ಸಭೆಯಲ್ಲಿ ತೀರ್ಮಾನಿಸಿದ್ದೆವು. ಅದೆಲ್ಲ ಸಭೆಗೆ ಮಾತ್ರ ಮೀಸಲಿಡಲಾಗಿದೆ. ಶನಿವಾರಸಂತೆಯಲ್ಲಿ ತೀವ್ರವಾದ ಕಸದ ಸಮಸ್ಯೆ ಇದೆ. ಇದರ ಬಗ್ಗೆ ಅರಿವಿಲ್ಲದಂತೆ ಆಡಳಿತ ನಡೆಸುವುದು ವಿಪರ್ಯಾಸ. ಶನಿವಾರಸಂತೆಯ ಮಕ್ಕಳ ಕಟ್ಟೆಕೆರೆಯನ್ನು ಅಭಿವೃದ್ಧಿಪಡಿಸಿ ಕಲ್ಯಾಣಿ ಮಾದರಿಯಲ್ಲಿ ಅದೊಂದು ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದು ಹೇಳಿದರು.

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಈಗಾಗಲೇ ೫೦ ಲಕ್ಷ ಹಣ ಬಿಡುಗಡೆಯಾಗಿದ್ದು, ಅದರ ಕೆಲಸ ಎಲ್ಲಿಗೆ ಬಂದಿದೆ. ಕಾನೂನಿನ ತೊಡಕು ನಿವಾರಿಸಿ ತಕ್ಷಣ ಕೆಲಸ ಪ್ರಾರಂಭಿಸು ವಂತೆ ಇಲ್ಲದಿದ್ದರೆ ಪ್ರತಿಭಟನೆಗೆ ಸಜ್ಜಾಗಬೇಕಾಗುತ್ತದೆ. ತಕ್ಷಣ ಕಾರ್ಯ ಪ್ರಾರಂಭಿಸಿ ಎಂದು ಎಸ್.ಎನ್. ರಘು, ಆದಿತ್ಯ ಗೌಡ, ಸರ್ದಾರ್ ಅಧ್ಯಕ್ಷರಿಗೆ ತಿಳಿಸಿದರು. ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರುಗಳಾದ ಶರತ್‌ಶೇಖರ್, ಫರ್ಜಾನ್ ಶಾಹಿದ್, ಕಾವೇರಿ, ಸರಸ್ವತಿ, ಸರ್ದಾರ್ ಅಹ್ಮದ್, ಆದಿತ್ಯ ಗೌಡ, ಎಸ್.ಎನ್. ರಘು, ಗೀತಾ ಹರೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯ ಆಚಾರ್, ಲೆಕ್ಕ ಸಹಾಯಕ ವಸಂತ, ಕಂಪ್ಯೂಟರ್ ನಿರ್ವಾಹಕಿಯರಾದ ಫೌಜಿಯಾ, ಲೀಲಾ ಹಾಜರಿದ್ದರು.

- ನರೇಶ್ಚಂದ್ರ