ಗೆಳೆತನ ಎಂಬ ಲೋಕದಲ್ಲಿ ಮುಳುಗಿದರೆ, ಅದುವೇ ನಮ್ಮ ಪ್ರಪಂಚ. ೧೯೩೫ರಂದು ಆಗಸ್ಟ್ ಮೊದಲ ವಾರವನ್ನು, ‘‘ಫ್ರೆಂಡ್ ಶಿಪ್ ಡೇ’’ ಎಂದು ಅಮೇರಿಕಾ ಸಂಸತ್ ಘೋಷಿಸಿತ್ತು. ಮೊದಲು ಸ್ನೇಹಿತರ ದಿನವನ್ನು ಜಾಯ್ಸ್ ಹಾಲ್ ಆರಂಭಿಸಿದರು. ೧೯೧೯ರಲ್ಲಿ ಹಾಲ್ ಮಾರ್ಕ್ ಕಾರ್ಡ್ಗಳನ್ನು ಸ್ಥಾಪಿಸಿದ ಜಾಯ್ಸ್ ಹಾಲ್ ಆಗಸ್ಟ್ ಮೊದಲ ಭಾನುವಾರವನ್ನು ಜನರು ಸ್ನೇಹಿತರ ದಿನವನ್ನು ಆಚರಿಸಬೇಕೆಂದು ಬಯಸಿ ಇದನ್ನು ಆರಂಭಿಸಿದರು. ಡಾ. ಅರ್ಟೆಮಿಯೋ ಬ್ರಾಚೋ ಎಂಬ ವ್ಯಕ್ತಿ ೧೯೫೮ ಜುಲೈ ೨೦ ರಂದು ವಿಶ್ವಮಟ್ಟದಲ್ಲಿ ಸ್ನೇಹಿತರ ದಿನವನ್ನು ಆಚರಿಸಬೇಕೆಂದು ಪ್ರಸ್ತಾಪವನ್ನಿಟ್ಟಿದ್ದರು. ೨೦೧೧ರ ಏಪ್ರಿಲ್ ೨೭ ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸ್ನೇಹಿತರ ದಿನವನ್ನು ಜುಲೈ ೩೦ ರಂದು ಆಚರಿಸಬೇಕೆಂದು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಆಗಸ್ಟ್ ಮೊದಲ ಭಾನುವಾರವನ್ನು ಎಲ್ಲೆಡೆ ವಿಶ್ವ "ಸ್ನೇಹಿತರ ದಿನ"ವೆಂದು ಆಚರಿಸಲಾಗುತ್ತಿದೆ. ತಂದೆ-ತಾಯಿ, ಅಕ್ಕ, ಅಣ್ಣಾ, ತಮ್ಮ ಹೀಗೆ ನಮ್ಮ ಎಲ್ಲ ಕುಟುಂಬ ಸದಸ್ಯರನ್ನು ಹೊರತುಪಡಿಸಿ, ನಮ್ಮೆಲ್ಲ ನೋವುಗಳನ್ನು ಹೇಳಲು, ಆ ನೋವುಗಳನ್ನು ಆಲಿಸಲು ಒಬ್ಬ ಗೆಳೆಯ ಇದ್ದಾನೆ ಎಂದರೆ ಅದಕ್ಕಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ.

ನನ್ನೆಲ್ಲ ಕಷ್ಟ-ಸುಖಗಳನ್ನು ಧೈರ್ಯದಿಂದ, ವಿಶ್ವಾಸದಿಂದ ಹಂಚಿಕೊಳ್ಳಲು ಒಬ್ಬ ನಿಷ್ಠಾವಂತ ಗೆಳೆಯನಿದ್ದಾನೆ. ಆತ ನನ್ನ ಹೆಗಲಿಗೆ, ಹೆಗಲು ನೀಡಿ ನನ್ನೊಂದಿಗೆ ಸದಾ ಕಾಲ ಇರುತ್ತಾನೆ ಎಂದರೆ ನಮ್ಮ ಜೀವನಕ್ಕೆ ಆನೆ ಬಲ ಬಂದAತಾಗುತ್ತದೆ. ಹಿರಿಯರು ಹೇಳುವ ಮಾತೊಂದಿದೆ, ಒಬ್ಬ ವ್ಯಕ್ತಿಯ ಗುಣ-ನಡೆತಗಳನ್ನು ಗುರುತಿಸಲು ಆತನ ಗೆಳೆಯರನ್ನು ನೋಡಿದರೆ ಸಾಕು. ಆಗ ಆತನ ವ್ಯಕ್ತಿತ್ವ ನಮಗೆ ತಿಳಿಯಲಿದೆ ಎಂದು. ಹೌದು ಈ ಮಾತು ನಿಜ. ಗೆಳೆತನಕ್ಕೆ ಬಡವ, ಶ್ರೀಮಂತ, ಮೇಲ್ಜಾತಿ, ಕೀಳ್ಜಾತಿ ಎಂಬ ಬೇಧ ಭಾವವಿಲ್ಲ. ಗೆಳೆಯರನ್ನು ಹಾರಿಸಿಕೊಳ್ಳುವಾಗ ಬಡವ, ಶ್ರೀಮಂತ, ಧರ್ಮ ಹಾಗೂ ಜಾತಿ ನೋಡಲು ಸಾಧ್ಯವೇ!?.

ಖಂಡಿತವಾಗಿಯೂ ಇಲ್ಲ. ಗೆಳೆತನಕ್ಕೆ ಯಾವತ್ತೂ ಕೂಡ ಬೆಲೆಕಟ್ಟಲಾಗದು. ಎಲ್ಲೋ ಹುಟ್ಟಿ ಬೆಳೆದವರು, ಯಾವುದೇ ಸಂಬAಧವಿಲ್ಲದವರು, ಆಕಸ್ಮಿಕವಾಗಿ ಪರಿಚಯವಾಗಿ ಗೆಳೆಯರಾಗುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಜೊತೆಯಾಗಿ, ತಮ್ಮ ಸಾವಿನವರೆಗೂ ಯಾವುದೇ ರೀತಿಯ ಜಗಳ, ಮುನಿಸು ಇಲ್ಲದೇ ತಮ್ಮ ಗೆಳೆತನವನ್ನು ಮುಂದುವರಿಸಿದ ಹಲವಾರು ಸ್ನೇಹಿತರು ನಮ್ಮ ಸಮಾಜದಲ್ಲಿದ್ದಾರೆ. ಬೇರೆ, ಬೇರೆ ತಾಯಿಯ ಹೊಟ್ಟೆಯಲ್ಲಿ ಜನ್ಮ ತಾಳಿ, ಒಂದೇ ತಟ್ಟೆಯಲ್ಲಿ ಊಟ ಮಾಡಿ, ತಾನು ಚನ್ನಾಗಿಲ್ಲದಿದ್ದರೂ ತೊಂದರೆಯಿಲ್ಲ, ನನ್ನ ಗೆಳೆಯ-ಗೆಳತಿಯರಿಗೆ ಯಾವುದೇ ತೊಂದರೆಯಾಗಬಾರದೆAದು ಜೀವಿಸಿದ ಜೀವಿಸುತ್ತಿರುವ ಅನೇಕ ಗೆಳೆಯರು ನಮ್ಮ ನಡುವೆ ಇದ್ದಾರೆ.

ಕಾಲ ಬದಲಾದಂತೆ ಗೆಳೆತನವೂ ಕೂಡ ಬದಲಾಗುತ್ತಿದೆ. ಎಲ್ಲರೂ ಆಧುನಿಕ ಯುಗದಲ್ಲಿ ಮುಳುಗಿ ಹೋಗಿದ್ದಾರೆ. ಎಲ್ಲೋ ಗೆಳೆತನಕ್ಕಿರುವ ಗೌರವ, ಸಂಬAಧ ಕಳೆದುಕೊಳ್ಳುತ್ತಿದೆ ಅನಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಗೆಳೆಯನಿಂದಲೇ ಗೆಳೆಯನ ಹತ್ಯೆ, ಗೆಳೆಯನ ಮೇಲೆ ಹಲ್ಲೆ ಮಾಡಿದ ಗೆಳೆಯ, ಗೆಳತಿಗೆ ಮೋಸ ಮಾಡಿದ ಗೆಳೆಯ, ಹೀಗೆ ಅನೇಕ ರೀತಿಯ ಸುದ್ದಿಗಳನ್ನ ನಾವು ಪ್ರತಿನಿತ್ಯ ಒಂದಲ್ಲಾ ಒಂದು ಪತ್ರಿಕೆ, ಮಾಧ್ಯಮಗಳಲ್ಲಿ ಕಾಣುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಗೆಳೆಯರಿಗಾಗಿ ತನ್ನ ಜೀವವನ್ನು ಕೊಡುವವರು, ಕೊಟ್ಟವರು ಇದ್ದರು. ಗೆಳೆತನ ಎಂಬುದು ಪವಿತ್ರ ಗೆಳೆಯರ ನಡುವಣ ಗುಟ್ಟು. ಯಾವುದೇ ಕಾರಣಕ್ಕೂ ರಟ್ಟಾಗಬಾರದು. ಜೀವಕ್ಕೆ, ಜೀವವನ್ನೇ ನೀಡುವ ಗೆಳೆಯ-ಗೆಳೆತಿಯರಿಗೆ ಮೋಸ ಮಾಡಲು ನಿಜವಾದ ಗೆಳೆಯರಿಗೆ ಮನಸ್ಸು ಬರುವುದಿಲ್ಲ. ಆದರೆ ಈ ಸ್ವಾರ್ಥ ಸಮಾಜದಲ್ಲಿ ಗೆಳೆತನಕ್ಕಿರುವ ಗೌರವ ಎಲ್ಲೋ ಕಳೆದುಕೊಳ್ಳುತ್ತಿದ್ದೇವೆ. ಗೆಳೆಯ-ಗೆಳತಿಯರನ್ನು ಆಯ್ಕೆ ಮಾಡುವಾಗ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಾದ ಪರಿಸ್ಥಿತಿ ಇಂದಿನ ಕಾಲಘಟ್ಟದಲ್ಲಿ ಎದುರಾಗಿದೆ. ಗೆಳೆಯರನ್ನು ಆರಿಸಿಕೊಳ್ಳುವಾಗ ಎಚ್ಚರಿಕೆಯಿಂದ ವಿಶ್ವಾಸವಿರುವ ಗೆಳೆಯ-ಗೆಳೆತಿಯರನ್ನು ಆರಿಸಿಕೊಳ್ಳಿ.

ಎಲ್ಲಾ ಗೆಳೆಯ-ಗೆಳತಿಯರಿಗೆ "ಹ್ಯಾಫಿ ಫ್ರೆಂಡ್ ಶಿಪ್ ಡೇ"

- ಕೆ.ಎಂ ಇಸ್ಮಾಯಿಲ್ ಕಂಡಕರೆ