ಅದೆಷ್ಟೋ ವರ್ಷಗಳಿಂದ ಜಿಲ್ಲೆಯ ಹಳ್ಳಿ ಹಳ್ಳಿಗೂ ಬಸ್ಗಳನ್ನು ಓಡಿಸುತ್ತಾ ಸೇವೆ ಸಲ್ಲಿಸುತ್ತಿರುವ ಖಾಸಗಿ ಬಸ್ ಮಾಲೀಕರ ಸ್ಥಿತಿ ಆರೋಗ್ಯಕರವಾಗಿಯೇನು ಇಲ್ಲ., ತೈಲ ಬೆಲೆ ಏರಿಕೆ ಸೇರಿದಂತೆ ಇತರ ಎಲ್ಲ ವಸ್ತುಗಳ ಬೆಲೆಏರಿಕೆ, ತೆರಿಗೆ ಹೆಚ್ಚಳದಿಂದಾಗಿ ಬವಣೆ ಅನುಭವಿಸುವಂತಾಗಿದೆ. ತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ, ಬಸ್ಗಳ ಪ್ರಮುಖ ಭಾಗವಾಗಿರುವ ಚಕ್ರಗಳ ತಯಾರಿಕೆಗೆ ಮುಖ್ಯವಾಗಿ ಪೆಟ್ರೋಲ್ ಅವಶ್ಯವಾಗಿದ್ದು, ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಚಕ್ರವೊಂದರ ಬೆಲೆ ಇದೀಗ ೫ಸಾವಿರದಷ್ಟು ಹೆಚ್ಚಾಗಿದೆ. ಆಯಿಲ್, ಬಿಡಿಭಾಗಗಳ ಬೆಲೆಯೂ ಏರಿಕೆಯಾಗಿದೆ. ಇದರೊಂದಿಗೆ ರಸ್ತೆ ತೆರಿಗೆ ಕೂಡ ಪಾವತಿ ಮಾಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ರೂ.೪೯ ಸಾವಿರ ತೆರಿಗೆ ಪಾವತಿ ಮಾಡಬೇಕು.
(ಮೊದಲ ಪುಟದಿಂದ) ಬಸ್ ಓಡಿಸಲು ಆರಂಭಿಸಿದ ೧೫ ದಿನಗಳೊಳಗಡೆ ಮುಂಗಡವಾಗಿಯೇ ತೆರಿಗೆ ಪಾವತಿ ಮಾಡಬೇಕು. ಒಂದು ದಿವಸ ಓಡಿಸಿದರೂ ತೆರಿಗೆ ಅನಿವಾರ್ಯ. ಹಾಗಾಗಿ ಪ್ರಯಾಣಿಕರಿಲ್ಲದೆ ಬಸ್ ಓಡಿಸಿದರೆ ಅಷ್ಟೂ ತೆರಿಗೆ ಹಣ ವ್ಯರ್ಥವಾಗಲಿದೆ. ಬಸ್ ಓಡಿಸದೆ ಹಾಗೇ ನಿಲ್ಲಿಸಿದರೂ ತೆರಿಗೆ ಕಟ್ಟಲೇ ಬೇಕಿದೆ. ಹಾಗಾಗಿ ಲಾಕ್ಡೌನ್ ಸಂದರ್ಭದಲ್ಲಿ ಎಲ್ಲ ಬಸ್ಗಳನ್ನು ಶರಣಾಗತಿ ಮಾಡಲಾಗಿದೆ. ಬಸ್ ಚಾಲಕರು, ನಿರ್ವಾಹಕರು, ಸೇರಿದಂತೆ ಸಿಬ್ಬಂದಿಗಳಿಗೆ ಸಂಬಳ ಕೊಡಬೇಕು. ಈ ನಡುವೆ ಪೈಪೋಟಿಯೊಂದಿಗೆ ಬಸ್ಗಳನ್ನು ಓಡಿಸುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವೊಂದು ಮಾಲೀಕರು ಬಸ್ಗಳನ್ನು ಮಾರಾಟ ಮಾಡುವ ಚಿಂತನೆಯಲ್ಲೂ ಇದ್ದಾರೆ. ಈ ಎಲ್ಲ ಸಂಕಷ್ಟಗಳ ನಡುವೆ ಹೇಗೆ ಬಸ್ ಓಡಿಸುವದೆಂಬ ಆತಂಕದಲ್ಲಿ ಮಾಲೀಕರುಗಳಿದ್ದಾರೆ.