ಮಡಿಕೇರಿ, ಜು. ೨೮: ರಾಜ್ಯ ಸಾರಿಗೆ ಸಂಸ್ಥೆ ಬಸ್ ಅಪಘಾತವಾಗಿ ನಾಲ್ವರು ಗಾಯಗೊಂಡಿರುವ ಘಟನೆ ಕೊಯಿನಾಡು ಬಳಿ ಸೋಮವಾರ ತಡರಾತ್ರಿ ನಡೆದಿದೆ.
ಮಡಿಕೇರಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬಸ್ ಎದುರು ಭಾಗದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ರಸ್ತೆ ಬದಿಯ ಚರಂಡಿಗೆ ವಾಲಿದೆ. ಮಧ್ಯರಾತ್ರಿ ೨ ಗಂಟೆ ವೇಳೆ ಈ ಘಟನೆ ನಡೆದಿದ್ದು, ಮಳೆ ಮತ್ತು ದಟ್ಟ ಮಂಜು ಕವಿದಿದ್ದ ಕಾರಣ ಬಸ್ ಚಾಲಕನಿಗೆ ಲಾರಿ ಕಾಣಿಸಲಿಲ್ಲ ಎಂದು ಹೇಳಲಾಗಿದೆ. ಅಪಘಾತದಲ್ಲಿ ಬಸ್ನ ಮುಂಭಾಗ ಜಖಂ ಆಗಿದ್ದು, ಚಾಲಕ ಸಹಿತ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಯಿನಾಡು ನಿವಾಸಿಗಳು ಹಾಗೂ ಪೊಲೀಸರು ನಾಲ್ವರು ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದರು. ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.