ಶ್ರೀಮಂಗಲ, ಜು. ೨೮: ಅತಿವೃಷ್ಟಿಯಂತಹ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಬೆಳೆ ನಷ್ಟಗೊಂಡ ಕಾಫಿ ಬೆಳೆಗಾರರಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ಹೆಕ್ಟೇರ್‌ಗೆ ರೂ. ೧೮ ಸಾವಿರದಿಂದ ರೂ. ೫೦ ಸಾವಿರಕ್ಕೆ ಹೆಚ್ಚಿಸಲು ಮತ್ತು ಕಾಫಿ ಬೆಳೆಗೆ ವಿಮೆ ಸೌಲಭ್ಯ ಜಾರಿಗೆ ತರಲು ಕೊಡಗು ಬೆಳೆಗಾರ ಒಕ್ಕೂಟದಿಂದ ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಅಧ್ಯಯನ ತಂಡಕ್ಕೆ ನೀಡಿದ್ದ ಮನವಿಯಂತೆ ವಾಣಿಜ್ಯ ಸಚಿವಾಲಯಕ್ಕೆ ಶಿಫಾರಸು ಮಾಡಿದ್ದು, ಇದನ್ನು ಕೂಡಲೇ ಕಾರ್ಯಗತಗೊಳಿಸಬೇಕೆಂದು ಕೊಡಗು ಬೆಳೆಗಾರರ ಒಕ್ಕೂಟ ಆಗ್ರಹಿಸಿದೆ.

ಗೋಣಿಕೊಪ್ಪದಲ್ಲಿ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ದೇಶದ ಬಹುದೊಡ್ಡ ವಿದೇಶಿ ವಿನಿಮಯ ಗಳಿಸಿಕೊಡುವ ಕಾಫಿ ಬೆಳೆ ನಷ್ಟಕ್ಕೆ ಯಾವುದೇ ಸರಕಾರದ ವಿಮೆ ಸೌಲಭ್ಯವಿಲ್ಲ. ಪರಿಹಾರ ಮೊತ್ತ ಹೆಚ್ಚಳ ಹಾಗೂ ವಿಮೆ ಸೌಲಭ್ಯದ ಬಗ್ಗೆ ಭಾರತೀಯ ಕಾಫಿ ಮಂಡಳಿ ಅಭಿಪ್ರಾಯವನ್ನು ಸಚಿವಾಲಯ ಕೇಳಿದ್ದು, ಕಾಫಿ ಮಂಡಳಿಯು ಸಹ ಪೂರಕವಾಗಿ ತನ್ನ ಪ್ರಸ್ತಾವನೆ ಸಲ್ಲಿಸಿದೆ. ಇವುಗಳನ್ನು ಕೂಡಲೇ ಕಾರ್ಯಗತಗೊಳಿಸಿ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ನೆರವಾಗಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಕೋವಿಡ್-೧೯ ಪರಿಹಾರ ಪ್ಯಾಕೇಜ್‌ನಲ್ಲಿ ದೇಶದ ಕಾರ್ಮಿಕರು, ಬೆಳೆಗಾರರಿಗೂ, ಎಲ್ಲಾ ವರ್ಗದ ಉದ್ಯಮಕ್ಕೂ ಸರಕಾರ ಪರಿಹಾರ ಪ್ಯಾಕೇಜ್ ನೀಡಿದೆ. ಆದರೆ, ಸಂಕಷ್ಟದಲ್ಲಿರುವ ಸಣ್ಣ ಕಾಫಿ ಬೆಳೆಗಾರರು ಮತ್ತು ಕಾಫಿ ತೋಟದ ಕೂಲಿ ಕಾರ್ಮಿಕರಿಗೆ ಯಾವುದೇ ಪರಿಹಾರ ದೊರೆತಿಲ್ಲ. ಈ ಬಗ್ಗೆ ಕೇಂದ್ರ ಸರಕಾರ ಪರಿಗಣಿಸಿ ಸಣ್ಣ ಕಾಫಿ ಬೆಳೆಗಾರರು ಮತ್ತು ಕಾಫಿ ತೋಟದ ಕೂಲಿ ಕಾರ್ಮಿಕರ ನೆರವಿಗೆ ಬರಬೇಕೆಂದು ಮನವಿ ಮಾಡಲಾಯಿತು.

೨೫ ವರ್ಷಗಳಿಂದ ಕಾಫಿದರ ಹೆಚ್ಚಾಗಿಲ್ಲ. ಪ್ರಧಾನಿ ನರೇಂದ್ರಮೋದಿ ಅವರು ದೇಶದ ರೈತರ, ಬೆಳೆಗಾರರ ಆದಾಯವನ್ನು ೨೦೨೨ರ ವೇಳೆಗೆ ದ್ವಿಗುಣಗೊಳಿಸುವ ಮಹತ್ವಕಾಂಕ್ಷೆ ಹೊಂದಿದ್ದಾರೆ. ಇದಕ್ಕೆ ಪೂರಕವಾಗಿ ಕಾಫಿ ಬೆಳೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸ್ಥಗಿತವಾಗಿರುವ ಕಾಫಿ ಮಂಡಳಿಯ ಶೇ. ೫೦ರ ಸಹಾಯಧನ ಯೋಜನೆಗಳನ್ನು ಗೋದಾಮು, ಕಾಫಿ ಕಣ, ನೀರಾವರಿ, ಯಾಂತ್ರೀಕರಣ ಇತ್ಯಾದಿ ಯೋಜನೆಗಳಿಗೆ ಯಥಾಪ್ರಕಾರ ಮುಂದುವರೆಸಬೇಕಾಗಿದೆ ಎಂದು ಮನವಿ ಮಾಡಲಾಯಿತು.

ಕಾಫಿ ಮಂಡಳಿ ಸಣ್ಣ ಕಾಫಿ ಬೆಳೆಗಾರರಿಗೆ ಮತ್ತು ಕಾಫಿ ತೋಟದ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಯೋಜನೆ ಸ್ಥಗಿತವಾಗಿದ್ದು, ಜಿಲ್ಲೆಯಲ್ಲಿ ರೂ. ೧.೫ ಕೋಟಿ ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಇದನ್ನು ಸಹ ಮುಂದುವರಿಸಿ ಆರ್ಥಿಕ ಸಂಕಷ್ಟದಲ್ಲಿರುವ ಸಣ್ಣ ಕಾಫಿ ಬೆಳೆಗಾರರು, ತೋಟದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಆಗುತ್ತದೆ. ಸರ್ಫೇಸಿ ಕಾಯಿದೆ ಕಾಫಿ ಬೆಳೆಗಾರರಿಗೆ ತೊಂದರೆ ಆಗುವುದರಿಂದ, ಇದನ್ನು ಬೆಳೆಗಾರರಿಗೆ ಅನುಕೂಲ ಆಗುವಂತೆ ಸರಕಾರ ತಿದ್ದುಪಡಿ ತರಬೇಕು. ಒಂದು ಜಿಲ್ಲೆ ಒಂದು ಬೆಳೆ ಎಂದು ಕೊಡಗು ಜಿಲ್ಲೆಯನ್ನು ಕಾಫಿ ಜಿಲ್ಲೆಯೆಂದು ಸರಕಾರ ಘೋಷಣೆ ಮಾಡಿದ್ದರೂ, ಇದರಿಂದ ಬೆಳೆಗಾರರಿಗೆ ಯಾವುದೇ ಅನುಕೂಲ ಆಗಿಲ್ಲ. ಎಲ್ಲಾ ಕಾಫಿ ಬೆಳೆಗಾರರಿಗೆ ಅನುಕೂಲ ಆಗುವಂತೆ ಈ ಯೋಜನೆ ಜಾರಿಗೆ ತರಬೇಕು. ಇವೆಲ್ಲದರ ಪರಿಗಣನೆ ಮೂಲಕ ಕಾಫಿ ಉದ್ಯಮದ ರಕ್ಷಣೆಗೆ ಕೇಂದ್ರ ಸರಕಾರ ಮುಂದಾಗಬೇಕೆAಬ ಒತ್ತಾಯ ಕೇಳಿಬಂತು.

ರಾಜ್ಯ ಸರಕಾರ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ವನ್ಯಪ್ರಾಣಿ ಹಾವಳಿ ತಡೆಗೆ ಸೂಕ್ತ ಯೋಜನೆ ರೂಪಿಸಬೇಕು. ಪೊನ್ನಂಪೇಟೆ ತಾಲೂಕಿಗೆ ತಹಶೀಲ್ದಾರ್ ನೇಮಕ, ಕಾಫಿ ಬೆಳೆಗಾರರು ಬಳಸುವ ೧೦ ಹೆಚ್.ಪಿ.ವರೆಗಿನ ಪಂಪುಸೆಟ್‌ಗಳಿಗೆ ಉಚಿತ ವಿದ್ಯುತ್ ಕಲ್ಪಿಸಬೇಕು ಎಂದು ಮನವಿ ಮಾಡಲಾಯಿತು.

ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ, ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್‌ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದದೇವಯ್ಯ, ಖಜಾಂಚಿ ಮಾಣೀರ ವಿಜಯ್‌ನಂಜಪ್ಪ, ನಿರ್ದೇಶಕರಾದ ಕಡೇಮಾಡ ಕುಸುಮಜೋಯ್ಯಪ್ಪ, ತಾಂತ್ರಿಕ ಸಲಹೆಗಾರರಾದ ಚೆಪುö್ಪಡೀರ ಶರಿಸುಬ್ಬಯ್ಯ, ಅಜ್ಜಿನಿಕಂಡ ಡಾ. ಗಣಪತಿ ಹಾಜರಿದ್ದರು.