ಸೋಮವಾರಪೇಟೆ, ಜು. ೨೮: ಜಲಮೂಲಗಳು ಹಾಗೂ ಕೆರೆಗಳ ಪುನಶ್ಚೇತನದಿಂದ ಮಾತ್ರ ಕೃಷಿ ವಲಯ ಸಮೃದ್ಧಿಯಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಜಲಮೂಲಗಳ ರಕ್ಷಣೆಗೆ ಎಲ್ಲರೂ ಆದ್ಯತೆ ನೀಡಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೆರೆ ಸಮಿತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಹೂಳು ತೆಗೆಯಲ್ಪಟ್ಟ ಗಣಗೂರು ಗ್ರಾ.ಪಂ. ವ್ಯಾಪ್ತಿಯ ಸಂಗಯ್ಯನಪುರ ಕೊರಲೆ ಕೆರೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಪ್ರತಿಯೊಂದು ಜೀವಿಗೂ ನೀರು ಮುಖ್ಯವಾಗಿದ್ದು, ಕೃಷಿ ಚಟುವಟಿಕೆ ಗಳೂ ಸಹ ಜಲಮೂಲವನ್ನೇ ಅವಲಂಭಿಸಿವೆ. ಈ ಹಿನ್ನೆಲೆ ಹೊಳೆ, ಕೆರೆ, ನದಿಗಳ ರಕ್ಷಣೆಯಾಗಬೇಕಿದೆ. ಸಾರ್ವಜನಿಕ ಕೆರೆಗಳ ಒತ್ತುವರಿ ತೆರವಿಗೆ ಸರ್ಕಾರವೂ ಕ್ರಮ ಕೈಗೊಂಡಿದ್ದು, ಒತ್ತುವರಿಯಾಗಿದ್ದ ಅನೇಕ ಕೆರೆಗಳನ್ನು ಮರಳಿ ವಶಕ್ಕೆ ಪಡೆದು ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗಿದೆ ಎಂದು ರಂಜನ್ ತಿಳಿಸಿದರು.
ಯೋಜನೆಯ ಮೂಲಕ ಹೂಳು ತೆಗೆಯಲ್ಪಟ್ಟ ಕೊರಲೆ ಕೆರೆಯನ್ನು, ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರಿಗೆ ಹೊಂಬಾಳೆ ನೀಡುವ ಮೂಲಕ ಶಾಸಕ ರಂಜನ್ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ಕುಮಾರ್ ಅವರು ಉಪಸ್ಥಿತರಿದ್ದು ಮಾತನಾಡಿ, ಯೋಜನೆಯ ಮೂಲಕ ಕೈಗೊಳ್ಳ ಲಾಗುತ್ತಿರುವ ಕಾರ್ಯಕ್ರಮಗಳು, ಅನುಷ್ಠಾನಗೊಳಿಸಲಾಗುವ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣಗೂರು ಗ್ರಾ.ಪಂ. ಉಪಾಧ್ಯಕ್ಷೆ ಗೌರಮ್ಮ ವಹಿಸಿದ್ದರು. ಗೋಣಿ ಮರೂರು ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಪುಟ್ಟಪ್ಪ, ವಾಣಿಜ್ಯ ಇಲಾಖೆಯ ನಿವೃತ್ತ ಅಧಿಕಾರಿ ನಾಣಯ್ಯ, ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೇಶ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ದೀಪಕ್, ಕೆರೆ ಸಮಿತಿ ಅಧ್ಯಕ್ಷ ಮೋಹನ್, ಪ್ರಮುಖರಾದ ಧರ್ಮಪ್ಪ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಜಯಂತಿ, ಕೃಷಿ ಮೇಲ್ವಿಚಾರಕಿ ಗೀತಾ, ವಲಯ ಮೇಲ್ವಿಚಾರಕ ಗುರುಪ್ರಸಾದ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಲಾಭಾಂಶ ವಿತರಿಸಲಾಯಿತು.