ಮಡಿಕೇರಿ, ಜು. ೨೭: ಬಿಜೆಪಿ ಪಕ್ಷವು ಮಡಿಕೇರಿ ನಗರಸಭೆಯಲ್ಲಿ ಅಧಿಕಾರದಲ್ಲಿದ್ದು, ಬಹಳಷ್ಟು ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಸಾಮಾನ್ಯ ಕಾರ್ಯಕರ್ತರ ಶ್ರಮದಿಂದ ಈ ಸಾಧನೆ ಆಗಿದೆ, ಅಪಪ್ರಚಾರಗಳಿಗೆ ಕಿವಿಗೊಡದೆ ಎಲ್ಲರೂ ಪಕ್ಷವನ್ನು ಮುನ್ನಡೆಸಬೇಕಾಗಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಬೋಪಯ್ಯ ಅವರು ಹೇಳಿದರು.
ಮಡಿಕೇರಿ ಬಿಜೆಪಿ ಕಚೇರಿಯಲ್ಲಿ ಮಡಿಕೇರಿ ಗ್ರಾಮಾಂತರ ಮಂಡಳ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಈ ಹಿಂದೆಯು ನಮ್ಮ ಭಾಜಪ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗಳಿಗೆ ದುಡಿದಿದ್ದು ಮುಂದಿನ ಚುನಾವಣೆಯಲ್ಲಿ ಪಕ್ಷ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಇವರನ್ನು ಗೆಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ತಾ.ಪಂ. ಹಾಗೂ ಜಿ.ಪಂ.ಯ ಮುಂದಿನ ಚುನಾವಣೆಯ ಮೀಸಲಾತಿಯು ಗೊಂದಲಮಯ ವಾಗಿದ್ದು ಈ ಬಗ್ಗೆ ಅನೇಕ ಮಂದಿ ನ್ಯಾಯಾಲಯ ಹಾಗೂ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದಾರೆ. ಮೀಸಲಾತಿ ಬದಲಾವಣೆ ಆಗುವ ಸಾಧ್ಯತೆಯು ಇದೆ ಎಂದು ಹೇಳಿದ ಶಾಸಕರು ಮುಂದಿನ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಯಬೇಕು ಎಂದು ತಿಳಿಸಿದರು. ಶಾಸP ರಂಜನ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪಕ್ಷ ಬೆಳೆದು ಬಂದ ರೀತಿ, ಕೋವಿಡ್ ಸಂದರ್ಭದಲ್ಲಿ ಆದಂತಹ ತೊಂದರೆ, ಎದುರಿಸಿದಂತಹ ಸಮಸ್ಯೆ, ಅಂತಹ ಸಮಯದಲ್ಲಿ ಭಾಜಪ ಕಾರ್ಯಕರ್ತರು, ಹಿಂದೂ ಪರ ಸಂಘಟನೆಗಳು ಜನರ ಸಹಾಯಕ್ಕೆ ಧಾವಿಸಿದ ರೀತಿಯ ಬಗ್ಗೆ ವಿವರವಾಗಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಂಡಲ ಅಧ್ಯಕ್ಷ ಕಾಂಗೀರ ಸತೀಶ್ ಪಕ್ಷ ನೀಡಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಲಾಗಿದೆ. ಕೊರೊನಾ ಸಂದರ್ಭ ವಿವಿಧ ಮೋರ್ಚಾಗಳಿಂದ ಕಿಟ್ ವಿತರಣೆ, ಆಹಾರ ವಿತರಣೆ, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅಲ್ಲದೆ ಯೋಗಾ ದಿನಾಚರಣೆ, ಗಿಡ ನೆಡುವ ಕಾರ್ಯಕ್ರಮಗಳು ಕೂಡ ಯಶಸ್ವಿಯಾಗಿದೆ ಎಂದರು.
ಮನು ಮುತ್ತಪ್ಪ ಮಾತನಾಡಿ ಬಿಜೆಪಿಯ ಆಡಳಿತದ ಬಗ್ಗೆ ವಿರೋಧ ಪಕ್ಷಗಳು ತಮ್ಮ ದೃಷ್ಟಿ ಕೋನದಲ್ಲಿ ಮಾತನಾಡಿವೆ. ಆದರೆ ಕೋವಿಡ್ ನಿರ್ವಹಣೆಯಲ್ಲಿ ಭಾರತ ದೇಶ ಸಾಧನೆ ಮಾಡಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಸಂಘಟನಾತ್ಮಕ ಚಟುವಟಿಕೆಯಿಂದಾಗಿ ಪಕ್ಷವು ಉತ್ತಮ ಹಾದಿಯಲ್ಲಿ ಸಾಗಲು ಸಾಧ್ಯವೆಂದರು. ವೇದಿಕೆಯಲ್ಲಿ ರಾಜ್ಯ ಪಶ್ಚಿಮಘಟ್ಟ ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿ ಕುಶಾಲಪ್ಪ, ಜಿಲ್ಲಾ ಭಾಜಪ ಉಪಾಧ್ಯಕ್ಷ ತಳೂರು ಕಿಶೋರ್ ಕುಮಾರ್, ಪ್ರಮುಖರಾದ ಬೆಲ್ಲು ಸೋಮಯ್ಯ, ಕೋಡಿ ಪೊನ್ನಪ್ಪ, ರವಿ ಚಿಯಣ್ಣ, ಬೆಪ್ಪುರನ ಮೇದಪ್ಪ, ಯುವ ಮೋರ್ಚಾ, ಕೃಷಿ ಮೋರ್ಚಾ, ಮಹಿಳಾ ಮೋರ್ಚಾ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಈ ಸಂದರ್ಭ ಮೋರ್ಚಾಗಳ ವರದಿಯನ್ನು ಮಂಡಿಸಲಾಯಿತು. ಬಡುವಂಡ್ರ ಕವಿತಾ ಬೆಳ್ಳಿಯಪ್ಪ ಪ್ರಾರ್ಥಿಸಿದರು,ಡೀನ್ ಬೋಪಣ್ಣ ಸ್ವಾಗತಿಸಿದರು, ಪ್ರಸನ್ನ ಕೋಡಿರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.