ಸಿದ್ದಾಪುರ, ಜು. ೨೭: ಮೂರ್ನಾಡಿನ ಉತ್ಸಾಹಿ ಯುವಕರನ್ನು ಒಳಗೊಂಡ ಮೈಮಾ ಸಂಘಟನೆಯು ನಿಸ್ವಾರ್ಥ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆÉ. ೫೦ಕ್ಕೂ ಅಧಿಕ ಯುವಕರನ್ನು ಒಳಗೊಂಡಿರುವ ಮೈಮಾ ಸಂಘಟನೆಯ ಕಾರ್ಯಕರ್ತರು ಲಾಕ್ಡೌನ್ ಸಮಯದಲ್ಲಿ ಸ್ವಯಂ ಸೇವಕರಾಗಿ ಹಗಲಿರುಳು ಸೇವೆ ಸಲ್ಲಿಸಿದ್ದಾರೆ. ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವುದು, ತುರ್ತು ಸಂದರ್ಭಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸುವುದು, ಕಿಟ್ ವಿತರಣೆ, ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ, ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ವಿತರಣೆ ಹಾಗೂ ಕಳೆದ ಎರಡು ವರ್ಷ ಕೊಡಗಿನಲ್ಲಿ ಪ್ರವಾಹ ಎದುರಾದ ಸಂದರ್ಭ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಸಹಾಯ ಮಾಡುವ ಮೂಲಕ ನಿರಂತರವಾಗಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮೈಮಾ ಸಂಘಟನೆಯ ಸಮಾಜ ಸೇವೆಯ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದು, ಮೂರ್ನಾಡು ಸುತ್ತಮುತ್ತಲಿನಲ್ಲಿ ಎಲ್ಲಾ ರೀತಿಯ ಸಹಾಯಕ್ಕೂ ದಿನದ ೨೪ ಗಂಟೆಗಳಲ್ಲೂ ಸಂಘಟನೆಯ ಕಾರ್ಯಕರ್ತರು ಸಿದ್ಧರಾಗಿದ್ದಾರೆ ಎಂದು ಸಂಘಟನೆಯ ಕಾರ್ಯದರ್ಶಿ ನಿಚ್ಚು ತಿಳಿಸಿದ್ದಾರೆ.