ಬೆಂಗಳೂರು ಜು. ೨೭: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಮಂಗಳವಾರ ಸಂಜೆ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಹೊಟೇಲ್ ಕ್ಯಾಪಿಟಲ್‌ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಬಾರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬೊಮ್ಮಾಯಿ ಅವರ ಹೆಸರು ಸೂಚಿಸಿದರು. ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಅನುಮೋದಿಸಿದರು. ಉಪ ಮುಖ್ಯಮಂತ್ರಿಗಳಾಗಿ ಗೋವಿಂದ ಕಾರಜೋಳ, ಆರ್. ಅಶೋಕ್ ಹಾಗೂ ಶ್ರೀರಾಮುಲು ಆಯ್ಕೆಗೊಂಡಿದ್ದಾರೆ. ಆಯ್ಕೆ ಬಳಿಕ ಬೊಮ್ಮಾಯಿ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಸರಕಾರ ರಚಿಸುವ ಹಕ್ಕು ಮಂಡಿಸಿದರು. ಬುಧವಾರ (ಇಂದು) ಬಸವರಾಜ್ ಬೊಮ್ಮಾಯಿ ಅವರು ರಾಜಭವನದಲ್ಲಿ ಕರ್ನಾಟಕದ ೨೩ ನೇ ಮುಖ್ಯಮಂತ್ರಿಯಾಗಿ ಬೆಳಿಗ್ಗೆ ೧೧ ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬಿಜೆಪಿ ರಾಷ್ಟಿçÃಯ ವರಿಷ್ಠರುಗಳಾದ ಧಮೇಂದ್ರ ಪ್ರಧಾನ್ ಹಾಗೂ ಅರುಣ್ ಸಿಂಗ್, ಕಿಶನ್ ರೆಡ್ಡಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಇವರುಗಳ ಸಮ್ಮುಖದಲ್ಲಿ ಸರ್ವಾನುಮತದಿಂದ ಈ ಆಯ್ಕೆ ನಡೆಯಿತು. ಯಡಿಯೂರಪ್ಪ ಅವರ ನಿಕಟವರ್ತಿಯಾದ ಬಸವರಾಜ್ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿಸ್ಥಾನ ದೊರಕಿರುವದರಿಂದ ಬಿಜೆಪಿಯಲ್ಲಿ ಭಿನ್ನಮತ ದೂರವಾಗಿದ್ದು ಶಾಸಕಾಂಗ ಪಕ್ಷದ ಸದಸ್ಯರುಗಳು ಅವಿರೋಧವಾಗಿ ಆಯ್ಕೆ ಮಾಡಿರುವದು ಇದರ ದ್ಯೋತಕವಾಗಿದೆ.

ಲಿಂಗಾಯಿತ ಸಮುದಾಯದ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಂಡು ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು. ಬಸವರಾಜ ಸೋಮಪ್ಪ ಬೊಮ್ಮಾಯಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ-ಚೆನ್ನಮ್ಮ ಅವರ ಪುತ್ರ. ೧೯೬೦ ರ ಜ.೨೮ ರಂದು ಜನಿಸಿದ ಬೊಮ್ಮಾಯಿ ಬಿ.ವಿ ಬೊಮ್ಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿAಗ್ ನಿಂದ ಮೆಕಾನಿಕಲ್ ಇಂಜಿನಿಯರಿAಗ್ ವಿಭಾಗದಲ್ಲಿ ಪದವಿ ಪಡೆದರು. ಬೊಮ್ಮಾಯಿ ಮೂಲತಃ ವೃತ್ತಿಯಲ್ಲಿ ಕೃಷಿಕ ಮತ್ತು ಕೈಗಾರಿಕೋದ್ಯಮಿ.

ನೀರಾವರಿ ಯೋಜನೆಗಳಲ್ಲಿ ಹಾಗೂ ನೀರಾವರಿ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿರುವ ಅವರು, ಹಾವೇರಿ ಜಿಲ್ಲೆಯ ಶಿಗ್ಗಾಂವಿನಲ್ಲಿ ಭಾರತದಲ್ಲೇ ಮೊದಲ ಶೇ.೧೦೦ ರಷ್ಟು ಕೊಳವೆ ನೀರಾವರಿ ಯೋಜನೆಯನ್ನು ಜಾರಿಗೆ ತರುವುದೂ ಸೇರಿದಂತೆ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಯಡಿಯೂರಪ್ಪ ಅವರ ಸಂಪುಟದಲ್ಲಿ ಮುಖ್ಯಮಂತ್ರಿಗಳ ಬಳಿಕ ಎರಡನೇ ಪ್ರಬಲ ಖಾತೆಯಾದ ಗೃಹ ಖಾತೆಯನ್ನೂ ನಿರ್ವಹಿಸಿ ಅನುಭವ ಹೊಂದಿರುವ ಬೊಮ್ಮಾಯಿ ಅವರು ತಮ್ಮ ರಾಜಕೀಯವನ್ನು ಪ್ರಾರಂಭಿಸಿದ್ದು ಜನತಾದಳದಿಂದ.

೧೯೯೮ ಹಾಗೂ ೨೦೦೪ ರಲ್ಲಿ ಧಾರವಾಡ ಸ್ಥಳೀಯ ಅಧಿಕಾರಿಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ೨೦೦೮ ರಲ್ಲಿ ಜನತಾದಳವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ೨೦೦೮ ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬೊಮ್ಮಾಯಿ ಆಯ್ಕೆಗೊಂಡಿದ್ದರು.

ವಿರೋಧಪಕ್ಷದ ಉಪನಾಯಕ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ಸಚಿವರಾಗಿ, ಸಹಕಾರ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವವನ್ನು ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ.

ಜನತಾದಳದಿಂದ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್.ಆರ್. ಬೊಮ್ಮಾಯಿ) ಅವರು ಮುಖ್ಯಮಂತ್ರಿಯಾಗಿದ್ದ (೧೯೮೮-೮೯) ೩೨-೩೩ ವರ್ಷಗಳ ನಂತರ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯಿಂದ ಇದೀಗ ಮುಖ್ಯಮಂತ್ರಿಯಾಗಿದ್ದಾರೆ.

ಜನ ಹಿತದ ನಿಲುವು : ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಆಯ್ಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ತಾನು ಜನಹಿತಕ್ಕೋಸ್ಕರ ಕಾರ್ಯ ನಿರ್ವಹಿಸುವುದಾಗಿ ಭರವಸೆಯಿತ್ತರು. ವಿಶೇ಼ಷವಾಗಿ ಬಡವರು, ಕೂಲಿ ಕಾರ್ಮಿಕರು, ದೀನದಲಿತರ ಹಿತರಕ್ಷಣೆ ಬಗ್ಗೆ ಗಮನ ಹರಿಸುವದಾಗಿ ತಿಳಿಸಿದರು. ಆದ್ಯತೆಯಲ್ಲಿ ಪ್ರಸ್ತುತ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಕುರಿತು ಗಮನ ಹರಿಸುವದಾಗಿ ನುಡಿದರು.