ಮಡಿಕೇರಿ, ಜು. ೨೬: ಸಾವಿನ ಅಂಚಿನಲ್ಲಿದ್ದ ಗೋವನ್ನು ಸ್ಥಳೀಯರು ನಿರಂತರ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ನಗರದ ಜಲಾಶಯ ಬಡಾವಣೆಯ ವಸತಿನಿಲಯ ಸಮೀಪ ಹಸುವೊಂದು ಮೇಯುವ ಸಂದರ್ಭ ಬಳಕೆಯಾಗದ ಶೌಚಾಲಯದ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದಿದೆ. ೫ ಅಡಿಗಿಂತ ಆಳದ ಗುಂಡಿಯೊಳಗೆ ಬಿದ್ದ ಪರಿಣಾಮ ಹೊರಬರಲಾಗದೆ ಹಸು ಮೂಕರೋಧನ ಅನುಭವಿಸುತಿತ್ತು. ಗುಂಡಿಯ ಸುತ್ತ ಕಬ್ಬಿಣದ ಸಲಾಕೆಗಳಿದ್ದ ಕಾರಣ ಮೇಲೆತ್ತಲು ಕೂಡ ಕಷ್ಟದಾಯಕವಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ತೆರಳಿದ ನಿವೃತ್ತ ಪೊಲೀಸ್ ಸಿಬ್ಬಂದಿ ಕಾವೇರಪ್ಪ ಅವರು, ಮುನೇಶ್ವರ ದೇವಸ್ಥಾನ ಯುವಕ ಮಂಡಳಿಯ ಸದಸ್ಯರು ಹಾಗೂ ಸಾರ್ವಜನಿಕರ ಸಹಾಯದೊಂದಿಗೆ ಗುಂಡಿಯನ್ನು ಅಗಲವಾಗಿ ತೋಡಿ ಸುತ್ತಲಿದ್ದ ಕಬ್ಬಿಣದ ಸಲಾಕೆಯನ್ನು ತುಂಡರಿಸಿ, ಹಸುವಿಗೆ ಹಗ್ಗಕಟ್ಟಿ ಎಳೆದು ಸತತ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಗೋವನ್ನು ಮೇಲೆತ್ತಿದ್ದರು.
ನಗರಸಭಾ ಸದಸ್ಯ ಅರುಣ್ ಶೆಟ್ಟಿ, ಲೈನ್‌ಮೆನ್ ಶಿವಣ್ಣ, ಎಂ.ಜಿ ನವೀನ್, ಪ್ರಭು ಮತ್ತು ಇನ್ನಿತರರು ಕಾರ್ಯಾಚರಣೆಗೆ ಸಹಕಾರ ನೀಡಿದರು.