ಕಣಿವೆ, ಜು. ೨೫: ತೋಟದ ಬದಿಯಲ್ಲಿ ಮೇಯಲು ಕಟ್ಟಿದ್ದ ಜಾನುವಾರುಗಳನ್ನು ಮನೆಗೆ ಒಯ್ಯಲು ತೆರಳಿದ ಸಂದರ್ಭ ಹಠಾತ್ತನೆ ಕಾಡಾನೆ ಧಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಂಜರಾಯಪಟ್ಟಣದ ಪೈಸಾರಿಯಲ್ಲಿ ಭಾನುವಾರ ಸಂಜೆ ನಡೆದಿದೆ.

ನಂಜರಾಯಪಟ್ಟಣ ಗ್ರಾಮದ ಕೂಲಿ ಕಾರ್ಮಿಕ ಉಲ್ಲಾಸ (೬೩) ಮೃತ ವ್ಯಕ್ತಿ.

ತಾವು ಸಾಕಿದ್ದ ನಾಲ್ಕು ಜಾನುವಾರುಗಳನ್ನು ಮಳೆಯಿಂದಾಗಿ ಕಳೆದೊಂದು ವಾರದಿಂದ ಮನೆಯಂಗಳದಲ್ಲೆ ಕಟ್ಟಿ ಹುಲ್ಲು ತಿನ್ನಿಸುತ್ತಿದ್ದರು. ಆದರೆ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮಳೆಯ ಪ್ರಮಾಣ ಕ್ಷೀಣಿಸಿದ್ದರಿಂದಾಗಿ ಜಾನುವಾರುಗಳನ್ನು ಮೀನುಕೊಲ್ಲಿ ಅರಣ್ಯದಂಚಿನ ರಸ್ತೆ ಬದಿಯಲ್ಲಿ ಮೇಯಲು ಕಟ್ಟಿದ್ದರು ಎನ್ನಲಾಗಿದ್ದು, ಸಂಜೆ ನಾಲ್ಕು ಗಂಟೆಯ ಸಮಯದಲ್ಲಿ ಮನೆಗೆ ಜಾನುವಾರು ಕರೆತರಲು ತೆರಳಿದ್ದಾಗ ಅರಣ್ಯದಂಚಿನಲ್ಲಿದ್ದ ಒಂಟಿ ಆನೆ ಉಲ್ಲಾಸ್ ಮೇಲೆ ಧಾಳಿ ನಡೆಸಿದೆ. ಕಾಡಾನೆ ಧಾಳಿಯಿಂದಾಗಿ ಗಂಭೀರ ಗಾಯಗೊಂಡಿದ್ದ ಉಲ್ಲಾಸ್ ತನ್ನ ಜೇಬಿನಲ್ಲಿದ್ದ ಫೋನ್‌ನಿಂದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ ತಕ್ಷಣ ಸ್ಥಳಕ್ಕೆ ತೆರಳಿ ಸ್ಥಳೀಯರೊಂದಿಗೆ ಕೂಡಲೇ ಗಾಯಾಳು ಉಲ್ಲಾಸ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಉಲ್ಲಾಸ್ ಕೊನೆಯುಸಿರೆಳೆದರು ಎಂದು ವಿಶ್ವ ‘ಶಕ್ತಿ’ಗೆ ತಿಳಿಸಿದರು.

ಸ್ಥಳಕ್ಕೆ ಅರಣ್ಯ ಇಲಾಖೆಯ ಫಾರೆಸ್ಟರ್ ಸುಬ್ರಾಯ ಆಗಮಿಸಿ ದೂರು ದಾಖಲಿಸಿಕೊಂಡಿದ್ದಾರೆ. ಮೃತ ಉಲ್ಲಾಸ್ ಶವವನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಸೋಮವಾರ ಮರಣೋತ್ತರ ಪರೀಕ್ಷೆಯ ಬಳಿಕ ಅಂತ್ಯಸAಸ್ಕಾರ ನಡೆಸಲಾಗುವುದು ಎಂದು ವಿಶ್ವ ತಿಳಿಸಿದ್ದಾರೆ. ಮೃತರು ಪತ್ನಿ ಸೇರಿದಂತೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ವರದಿ : ಮೂರ್ತಿ ಕೆ.ಎಸ್.