ಹೆಚ್.ಜೆ. ರಾಕೇಶ್

ಮಡಿಕೇರಿ, ಜು. ೨೫: ಕೆಲ ಕಾರಣಗಳಿಂದ ರದ್ದುಗೊಂಡಿದ್ದ ಬಿ.ಪಿ.ಎಲ್. ಪಡಿತರ ಚೀಟಿಯನ್ನು ಮತ್ತೆ ಪಡೆಯಲು ಕೊಡಗು ಜಿಲ್ಲೆಯ ಜನರು ಹರಸಾಹಸÀಪಡುತ್ತಿದ್ದು, ಕಚೇರಿಗೆ ಅಲೆದಾಡುತ್ತ ಮರಳಿ ಬಿಪಿಎಲ್ ಕಾರ್ಡ್ ಪಡೆಯಲು ಆಹಾರ ಇಲಾಖೆಯ ಕಚೇರಿಗೆ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಮಾನದಂಡ ಸರಿಯಾಗಿರುವವರ ಕಾರ್ಡ್ ಕೂಡ ಮಾನ್ಯತೆ ಕಳೆದುಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಈಗಾಗಲೇ ೩,೫೦೦ಕ್ಕೂ ಹೆಚ್ಚು ಕುಟುಂಬದ ಬಿಪಿಎಲ್ ಕಾರ್ಡ್ಗಳ ಮಾನ್ಯತೆ ರದ್ದಾಗಿವೆೆ. ಜಿಲ್ಲೆಯಲ್ಲಿ ಒಟ್ಟು ೧,೪೧,೯೪೧ ಮಂದಿ ಬಿ.ಪಿ.ಎಲ್ ಕಾರ್ಡ್ದಾರರಿದ್ದು, ಸರಕಾರದಿಂದ ಅಕ್ಕಿ, ಬೇಳೆ, ಸೀಮೆಎಣ್ಣೆ, ಧಾನ್ಯ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳು ಆರ್ಥಿಕವಾಗಿ ಹಿಂದುಳಿದವರ ಕೈ ಸೇರುತ್ತಿವೆÉ. ಅದಲ್ಲದೆ ಸರಕಾರದ ಯೋಜನೆ ಪಡೆಯಲು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಸಹಕಾರಿಯಾಗುತ್ತಿದೆ. ಆದರೆ, ಕೆಲವು ತಪ್ಪು ಮಾಹಿತಿ ನೀಡಿ ಅಥವಾ ಇತ್ತೀಚಿನ ದಿನಗಳಲ್ಲಿ ಆರ್ಥಿಕವಾಗಿ ಬೆಳವಣಿಗೆ ಸಾಧಿಸಿದರು ಬಿ.ಪಿ.ಎಲ್. ಹಾಗೂ ಅಂತ್ಯೋದಯ ಕಾರ್ಡ್ನಿಂದ ಹೊರಬಾರದವರನ್ನು ಪತ್ತೆಹಚ್ಚಲು ಆಹಾರ ಇಲಾಖೆ ಮುಂದಾಗಿತ್ತು. ಅಂತವರ ಕಾರ್ಡ್ಗಳ ಮಾನ್ಯತೆಯನ್ನು ರದ್ದುಮಾಡಿ ಇಲಾಖೆ ಕ್ರಮ ಕೈಗೊಂಡಿತ್ತು. ಇದೀಗ ಈ ವಿಚಾರ ಸಾವಿರಾರೂ ಮಂದಿಯ ಗೊಂದಲಕ್ಕೆ ಕಾರಣವಾಗಿದೆ.

ಕೊರೊನಾ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಸಮಸ್ಯೆ ಇರುವ ಸಂದರ್ಭ ಕೈಗೊಂಡ ಈ ಕ್ರಮದಿಂದ ತೊಂದರೆಗೆ ಒಳಗಾಗಿರುವ

(ಮೊದಲ ಪುಟದಿಂದ) ನೈಜ ಫಲಾನುಭವಿಗಳು ಬಿ.ಪಿ.ಎಲ್. ಕಾರ್ಡ್ ಪಡೆಯಲು ಆಹಾರ ಇಲಾಖೆಯ ಕಚೇರಿಗೆ ಅಲೆದಾಡುತ್ತಿದ್ದಾರೆ.

೩೫೦೯ ಕಾರ್ಡ್ ರದ್ದು

ಕೊಡಗು ಜಿಲ್ಲೆಯಲ್ಲಿ ಒಟ್ಟು ೩೫೦೯ ಪಡಿತರ ಕಾರ್ಡ್ಗಳನ್ನು ರದ್ದುಗೊಳಿಸಲಾಗಿದೆ. ಈ ಪೈಕಿ ೮೯ ಅಂತ್ಯೋದಯ ಹಾಗೂ ೧೩೨೫ ಬಿ.ಪಿ.ಎಲ್. ಕಾರ್ಡ್ ಸೇರಿದಂತೆ ಒಟ್ಟು ೧೪೧೪ ಕಾರ್ಡ್ಗಳು ಜಿಲ್ಲಾ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ನಿಯಮ ಉಲ್ಲಂಘಿಸಿ ಕಾರ್ಡ್ ಪಡೆದಿರುವುದು ತಿಳಿದು ಬಂದಿತ್ತು.

ಅದಲ್ಲದೆ ರಾಜ್ಯ ಮಟ್ಟದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ೨೦೯೫ ಕಾರ್ಡ್ಗಳು ನಿಯಮ ಮೀರಿ ಪಡೆದಿರುವುದು ತಿಳಿದು ಬಂದಿದೆ. ಇದರಲ್ಲಿ ತೆರಿಗೆ ಪಾವತಿದಾರರು, ಆದಾಯ ಮಿತಿ ಹೆಚ್ಚಿರುವವರು ಒಳಗೊಂಡಿದ್ದಾರೆ ಎನ್ನಲಾಗಿತ್ತು. ಜಿಲ್ಲೆಯ ೫೪೧ ತೆರಿಗೆ ಪಾವತಿದಾರರು (ಟ್ಯಾಕ್ಸ್ ಪೆರ‍್ಸ್) ಬಿ.ಪಿ.ಎಲ್ ಹಾಗೂ ಅಂತ್ಯೋದಯ ಕಾರ್ಡ್ ಪಡೆದುಕೊಂಡಿದ್ದರು ಎಂದು ಪರಿಶೀಲನೆ ವೇಳೆ ದೃಢಪಟ್ಟಿತ್ತು.

ಗೊಂದಲ ಸೃಷ್ಟಿ

ಮಾಸಿಕ ಸಿಗುವ ಪಡಿತರ ಪಡೆಯಲು ತೆರಳಿದಾಗ ಮಾನ್ಯತೆ ರದ್ದಾಗಿ ಎ.ಪಿ.ಎಲ್ ಕಾರ್ಡ್ ಆಗಿ ಪರಿವರ್ತನೆಯಾಗಿರುವುದು ಜನರಿಗೆ ತಿಳಿದುಬಂದಿದೆ. ಇದರಿಂದ ಗೊಂದಲಕ್ಕೆ ಒಳಗಾದ ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಡ ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು, ಮಾನದಂಡ ಸರಿಯಾಗಿರುವವರ ಕಾರ್ಡ್ ಅನರ್ಹಗೊಂಡಿರುವ ಬಗ್ಗೆ ಹಲವು ದೂರುಗಳು ಕೇಳಿಬಂದಿವೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕೆಲವೆಡೆ ಪ್ರತಿಭಟನೆ ನಡೆಸಿ ಇಲಾಖೆಯ ನಡೆಯನ್ನು ಖಂಡಿಸಲಾಗಿದೆ.

ಕಾರ್ಡ್ ಮಾನ್ಯತೆ ಕಳೆದುಕೊಂಡ ಕೆಲವರು ತಮಗೆ ಎಲ್ಲಾ ಅರ್ಹತೆ ಇದ್ದರೂ ಕಾರ್ಡ್ ರದ್ದಾಗಿದೆ. ಆದರೆ, ಶ್ರೀಮಂತರ ಕಾರ್ಡ್ಗಳು ಯಥಾಸ್ಥಿತಿಯಲ್ಲಿವೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇಲಾಖೆ ವೈಜ್ಞಾನಿಕವಾಗಿ ಚಿಂತಿಸದೆ ನಾಮಕಾವಸ್ಥೆ ರೀತಿ ಕ್ರಮಕೈಗೊಂಡಿದೆ ಎಂದು ಕೆಲವರು ಆರೋಪಿಸಿದ್ದಾರೆ.

ತಮ್ಮ ಕುಟುಂಬ ಆರ್ಥಿಕವಾಗಿ ಹಿಂದುಳಿದಿದೆ. ಪಡಿತರ ಲಭ್ಯತೆಯಿಂದ ಜೀವನ ನಿರ್ವಹಣೆ ಸುಲಭವಾಗಿತ್ತು. ಇದೀಗ ಮಾನ್ಯತೆ ರದ್ದಾಗಿರುವುದರಿಂದ ತೊಂದರೆಯಾಗಿದೆ. ಉಚಿತವಾಗಿ ದೊರೆಯುತ್ತಿದ್ದ ಪಡಿತರಕ್ಕೆ ಇದೀಗ ಹೆಚ್ಚಿನ ಹಣ ನೀಡಿ ಪಡಿತರ ಪಡೆಯಬೇಕಾದ ಪರಿಸ್ಥಿತಿ ಇದೆ ಎಂದು ಮಡಿಕೇರಿಯ ನಿವಾಸಿ ಗೋಪಾಲ್ ಹೇಳುತ್ತಾರೆ.

೫೯ ಅರ್ಜಿ ವಿಲೇವಾರಿ

ಈಗಾಗಲೇ ಅನರ್ಹಗೊಂಡ ಕಾರ್ಡ್ಗಳ ಪೈಕಿ ನೈಜ ಫಲಾನುಭವಿಗಳ ಅರ್ಜಿಯನ್ನು ಸಮರ್ಪಕವಾಗಿ ಪರಿಶೀಲಿಸಿ ಸದ್ಯಕ್ಕೆ ೫೯ ಅರ್ಜಿಗಳನ್ನು ಬೆಂಗಳೂರಿನ ಆಹಾರ ಇಲಾಖೆಯ ಆಯುಕ್ತರ ಕಚೇರಿಗೆ ಕೊಡಗು ಜಿಲ್ಲಾಧಿಕಾರಿ ಮೂಲಕ ವಿಲೇವಾರಿ ಮಾಡಲಾಗಿದೆ.

ಇದರೊಂದಿಗೆ ಇನ್ನೂ ಆನೇಕ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಮತ್ತೊಂದು ಸುತ್ತಿನಲ್ಲಿ ಇನ್ನಷ್ಟು ಅರ್ಜಿಗಳನ್ನು ಕಳುಹಿಸಲಾಗುವುದು ಎಂದು ಆಹಾರ ಇಲಾಖೆ ಉಪನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ‘ಶಕ್ತಿ’ಗೆ ತಿಳಿಸಿದ್ದಾರೆ. ಕೆಲವೇ ದಿನದಲ್ಲಿ ಇದು ಸರಿಯಾಗುವ ಸಾಧ್ಯತೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.