ಇಂದು ಜುಲೈ ೨೬ ಭಾರತದಾದ್ಯಂತ ಕಾರ್ಗಿಲ್ ವಿಜಯೋತ್ಸವ ದಿನ. ಹಿಮಚ್ಛಾದಿತ ಮೈಕೊರೆಯುವ ಚಳಿಯಲ್ಲಿ ದೇಶದ ಮುಕುಟಮಣಿ ಕಾಶ್ಮೀರದ ಕಾರ್ಗಿಲ್ ಪ್ರದೇಶವನ್ನು ಶತ್ರುಗಳ ಕೈಯಿಂದ ಮರಳಿ ಪಡೆದ ಐತಿಹಾಸಿಕ ದಿನ. ದೇಶ ರಕ್ಷಣೆಗಾಗಿ ಪ್ರಾಣವನ್ನೇ ತ್ಯಾಗ ಮಾಡುವ ಅಪ್ರತಿಮ ದೇಶಭಕ್ತ ಸೈನಿಕರು ಎದೆಯುಬ್ಬಿಸಿ ಭಾರತದ ತ್ರಿವರ್ಣ ಧ್ವಜವನ್ನು ಕಾರ್ಗಿಲ್ನ ಶಿರಕ್ಕೆ ತೊಡಿಸಿದ ಸುವರ್ಣ ದಿನ.
ಪ್ರಪಂಚ ಸೇರಿದಂತೆ ಭಾರತ ಕಂಡ ಇತ್ತೀಚಿನ ಯುದ್ಧಗಳಲ್ಲಿ ಕಾರ್ಗಿಲ್ ಯುದ್ಧ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದು. ಎರಡೂ ದೇಶಗಳ ನಡುವೆ ನಡೆದ ಸುದೀರ್ಘ ಸಶಸ್ತç ಭೂ ಯುದ್ಧ. ಕಾಶ್ಮೀರದ ಕಾರ್ಗಿಲ್ ಮತ್ತು ನಿಯಂತ್ರಣ ರೇಖೆಯ ಪ್ರದೇಶದಲ್ಲಿ ೧೯೯೯ರ ಮೇ ಮತ್ತು ಜುಲೈ ನಡುವೆ ಏರ್ಪಟ್ಟ ಈ ಯುದ್ಧದಲ್ಲಿ ಭಾರತವೇ ಮೇಲುಗೈ ಸಾಧಿಸಿತಾದರೂ, ಶತ್ರು ದೇಶದ ಹೆಡೆಮುರಿಕಟ್ಟಿದ ಭಾರತದ ಹಲವಷ್ಟು ಸೈನಿಕರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದರು.
ಉಭಯ ರಾಷ್ಟçಗಳ ನಡುವಿನ ಗಡಿ ನಿಯಂತ್ರಣಾ ರೇಖೆಯಲ್ಲಿರುವ ಭಾರತದ ನೆಲೆಗಳಿಗೆ ಪಾಕಿಸ್ತಾನದ ಸೈನಿಕರು ಹಾಗೂ ಕಾಶ್ಮೀರಿ ಉಗ್ರಗಾಮಿಗಳು ನುಸುಳಿದ್ದೇ ಯುದ್ಧಕ್ಕೆ ಕಾರಣವಾಯಿತು. ಮೊದಮೊದಲು ಕಾಶ್ಮೀರದ ಸ್ವಾತಂತ್ರö್ಯಕ್ಕಾಗಿ ಹೋರಾಡುವ ಪ್ರತ್ಯೇಕತಾವಾದಿಗಳ ಕೃತ್ಯ ಎಂದು ಪಾಕಿಸ್ತಾನ ಹೇಳಿಕೆ ನೀಡಿತಾದರೂ, ತನ್ನ ದೇಶದ ಸೈನಿಕರ ಸಾವು, ಸೇನಾ ಸಿಬ್ಬಂದಿ, ಮುಖ್ಯಸ್ಥರ ಹೇಳಿಕೆ, ಜನರಲ್ ಅಶ್ರಫ್ ರಶೀದ್ ನೇತೃತ್ವದ ಪಾಕಿಸ್ತಾನಿ ಅರೆಸೇನಾ ಪಡೆಗಳ ಪಾಲ್ಗೊಳ್ಳುವಿಕೆಯಿಂದ ಇದು ಪಾಕಿಸ್ತಾನದ ಕೃತ್ಯ ಎಂಬುದು ವೇದ್ಯವಾಯಿತು.
ಚಳಿಗಾಲದ ಸಂದರ್ಭ ಕಾಶ್ಮೀರ ಹಿಮಚ್ಛಾದಿತ ಪರ್ವತ ಪ್ರದೇಶದಲ್ಲಿ ಮೈಕೊರೆಯುವ ಚಳಿ ಇರುವದರಿಂದ ಎರಡೂ ದೇಶಗಳ ಸೈನಿಕರು ಗಡಿ ನಿಯಂತ್ರಣ ರೇಖೆಯಿರುವ ಎತ್ತರದ ಪ್ರದೇಶಗಳ ಮುಂಚೂಣಿ ಶಿಬಿರಗಳನ್ನು ತ್ಯಜಿಸುವದು, ಚಳಿ ಕಡಿಮೆಯಾದಂತೆ ಮತ್ತೆ ಶಿಬಿರಕ್ಕೆ ತೆರಳಿ ಮರು ವಶ ಪಡೆದುಕೊಳ್ಳುವದು ಸಾಮಾನ್ಯ. ಆದರೆ ಇದೇ ಸಮಯವನ್ನು ಬಳಸಿಕೊಂಡ ಪಾಕಿಸ್ತಾನ ಪಡೆಗಳು ನಿಯಂತ್ರಣ ರೇಖೆಯನ್ನು ದಾಟಿ ಭಾರತದೊಳಕ್ಕೆ ಕಾಲಿಟ್ಟವು. ಇಷ್ಟಕ್ಕೆ ನಿಲ್ಲದ ಪಾಕಿಸ್ತಾನಿ ಸೈನಿಕರು ಕೆಳ ಮುಷೋಖ್ ಕಣಿವೆ ಶಿಬಿರ, ಮಾರ್ಪೋಲಾ ಪರ್ವತ, ಕಕ್ಸಾರ್, ಸಿಂಧೂನದಿ ಪೂರ್ವದ ಬಟಾಲಿಕ್ ವಲಯದ ಚೋರ್ ಬಾಟ್ಲಾ ಶಿಬಿರ, ಸಿಯಾಚಿನ್ನ ದಕ್ಷಿಣಕ್ಕಿರುವ ಟರ್ಟೋಕ್ ವಲಯಗಳನ್ನು ಅತಿಕ್ರಮಿಸಿದವು.
ಕಾರ್ಗಿಲ್ ಪ್ರದೇಶ ಕಾಶ್ಮೀರದ ಶ್ರೀನಗರದಿಂದ ೨೦೫ ಕಿ.ಮೀ. ದೂರದಲ್ಲಿದ್ದು, ನಿಯಂತ್ರಣ ರೇಖೆಯಲ್ಲಿನ ಎತ್ತರದ ಪ್ರದೇಶಕ್ಕೆ ಅಭಿಮುಖವಾಗಿದೆ. ಶ್ರೀನಗರದಿಂದ ಲೇಹ್ ಸಂಪರ್ಕಿಸುವ ರಾಷ್ಟಿçÃಯ ಹೆದ್ದಾರಿ ಕಾರ್ಗಿಲ್ ಮೂಲಕ ಹಾದು ಹೋಗುತ್ತದೆ. ಆದರೆ ಪಾಕಿಸ್ತಾನ ನಿಯಂತ್ರಿತ ಸ್ಕಾರ್ಡು ಪಟ್ಟಣದಿಂದ ಕೇವಲ ೧೭೩ ಕಿ.ಮೀ. ಅಂತರದಲ್ಲಿ ಕಾರ್ಗಿಲ್ ಇದ್ದು, ಇದನ್ನು ಸುತ್ತುವರಿದ ಭೂ ಪ್ರದೇಶ ಮತ್ತು ಈ ಪ್ರದೇಶದಲ್ಲಿ ಸೇನಾ ನೆಲೆಗಳು ಇಲ್ಲದೇ ಇದ್ದುದು ಪಾಕಿಸ್ತಾನ ಸೈನಿಕರು ಒಳ ಪ್ರವೇಶಿಸಲು ವರದಾನವಾಯಿತು. ಇದರೊಂದಿಗೆ ತನ್ನ ಸೈನಿಕರಿಗೆ ಯುದ್ಧ ಸಾಮಗ್ರಿ ಹಾಗೂ ಫಿರಂಗಿಗಳನ್ನು ಒದಗಿಸಲು ಪಾಕಿಸ್ತಾನಕ್ಕೆ ಸಹಕಾರಿಯಾಯಿತು.
೧೯೬೯ರಲ್ಲಿ ಚೀನಾ-ಸೋವಿಯತ್ ಗಡಿ ಸಂಘರ್ಷದ ನಂತರ, ಅಣ್ವಸ್ತçಗಳನ್ನು ಅಭಿವೃದ್ಧಿ ಪಡಿಸಿದ ಬಳಿಕ ಎರಡು ದೇಶಗಳ ನಡುವೆ ನಡೆದ ಎರಡನೇ ಭೂ ಯುದ್ದ ಎಂದರೆ ಕಾರ್ಗಿಲ್ ಕದನ.
ಮೊದಮೊದಲು ಈ ಅತಿಕ್ರಮಣದ ಬಗ್ಗೆ ಅರಿವು ಮಾಡಿಕೊಳ್ಳದ ಭಾರತ, ನಿಧಾನವಾಗಿ ಎಚ್ಚೆತ್ತಿತು. ಕುರಿ ಕಾಯುವ ವ್ಯಕ್ತಿಯೋರ್ವ ನೀಡಿದ ಸುಳಿವಿನ ಮೇರೆ ಕ್ಯಾಪ್ಟನ್ ಸೌರಭ್ ಕಾಲಿಯಾ ನೇತೃತ್ವದ ತಂಡವನ್ನು ಈ ಪ್ರದೇಶಕ್ಕೆ ಕಳುಹಿಸಿತು. ಆನಂತರವೇ ಶತ್ರುಗಳು ತಮ್ಮ ನೆಲೆಯಲ್ಲಿ ಅವಿತಿರುವದು ತಿಳಿದುಬಂತು. ತಕ್ಷಣ ಸರ್ಕಾರ ಎಚ್ಚೆತ್ತುಕೊಂಡಿತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ನೆರೆಯ ರಾಷ್ಟç ಪಾಕಿಸ್ತಾನದೊಂದಿಗೆ ಮಾತನಾಡಿದರು. ಮಾತುಕತೆಯಿಂದ ಯಾವದೇ ಪ್ರಯೋಜನವಾಗಲಿಲ್ಲ.
ನಂತರ ನಡೆದದ್ದು ಗ್ರೆನೇಡ್, ಫಿರಂಗಿ, ಮದ್ದುಗುಂಡುಗಳ ಆರ್ಭಟ. ಕಾರ್ಗಿಲ್ನ ಹಿಮಚ್ಛಾದಿತ ಬಿಳಿ ಪ್ರದೇಶದಲ್ಲಿ ರಕ್ತದ ಕಲೆಗಳ ಇತಿಹಾಸ ನಿರ್ಮಾಣವಾಯಿತು. ತಮ್ಮದೇ ನೆಲಯಲ್ಲಿ ಸೈನಿಕರ ರಕ್ತ ಹರಿಯಿತು. ತಾಯಿ ಭಾರತಿಯ ರಕ್ಷಣೆಗೆ ಪ್ರಾಣವನ್ನಾದರೂ ನೀಡಿಯೇ ಸಿದ್ದ ಎಂಬ ದೇಶಭಕ್ತಿಯ ಬತ್ತಿ ಉರಿಯಲಾರಂಭಿಸಿತು. ದಿನದ ೨೪ ಗಂಟೆಯೂ ಯುದ್ಧಭೂಮಿಯಲ್ಲಿ ಗುಂಡಿನ ಚಕಮಕಿ ನಡೆಯಲಾರಂಭಿಸಿತು.
ರಾಷ್ಟಿçÃಯ ಹೆದ್ದಾರಿಗೆ ಸಮೀಪದ ಬೆಟ್ಟಗಳನ್ನು ಮರುವಶ ಮಾಡಿಕೊಳ್ಳಲು ಸೈನಿಕರು ನಿರ್ಧರಿಸಿದರು. ಶ್ರೀನಗರದ ಲೇಹ್ ಮಾರ್ಗವನ್ನು ಆವರಿಸಿಕೊಂಡಿರುವ ಟೈಗರ್ ಹಿಲ್ ಮತ್ತು ಡ್ರಾಸ್ನ ಟೋಲೊಲಿಂಗ್ ವಶಪಡಿಸಿಕೊಂಡರು. ನಂತರ ಸಿಯಾಚಿನ್ ನೀರ್ಗಲ್ಲು ಪ್ರದೇಶಕ್ಕೆ ಪ್ರವೇಶ ಕಲ್ಪಿಸುವ ಬಟಾಲಿಕ್ ಟರ್ಟೋಕ್ ಉಪವಲಯದ ಸೇನಾ ಪಡೆಗಳನ್ನು ವಶಕ್ಕೆ ತೆಗೆದುಕೊಂಡು ಮುಂದೆ ಸಾಗುತ್ತಿದ್ದರು.
ಇತ್ತ ಸೈನಿಕನ ಮನೆಯಲ್ಲಿ ದುಗುಡ ದುಮ್ಮಾನ ಹೆಚ್ಚುತ್ತಾ ಹೋಯಿತು. ದೇಶದ ಪ್ರತಿಯೋರ್ವ ಪ್ರಜೆಯೂ ಕಣ್ಮಿಟುಕಿಸದೇ ಯುದ್ಧದ ಪ್ರಗತಿಯತ್ತ ದೃಷ್ಟಿ ನೆಟ್ಟರು. ಪತ್ರಿಕೆಗಳಿಗೆ ಕಾದರು, ದೃಶ್ಯಮಾದ್ಯಮವನ್ನು ಎವೆಯಿಕ್ಕದೆ ವೀಕ್ಷಿಸಿದರು. ಆಕಾಶವಾಣಿಯ ವಾರ್ತೆಗಳಿಗೆ ರೇಡಿಯೋ ಟ್ಯೂನ್ ಮಾಡಲಾರಂಭಿಸಿದರು. ದೇಶಕ್ಕೆ ದೇಶವೇ ಸೈನಿಕರಿಗೆ ಹಾರೈಕೆಗಳ ಸುರಿಮಳೆಗರೆಯುತ್ತಿತ್ತು.
ನಮ್ಮ ಸೇನೆಯ ಹಲವಷ್ಟು ಸೈನಿಕರು ಪ್ರಾಣತ್ಯಾಗ ಮಾಡಿದರು. ಇವರ ಪ್ರಾಣ ತ್ಯಾಗಕ್ಕೆ ತಕ್ಕ ಪ್ರತಿಫಲ ಪಡೆಯಬೇಕೆಂಬ ಛಲದೊಂದಿಗೆ ಉಳಿದ ಸೈನಿಕರು ಮುನ್ನುಗ್ಗಿದರು. ಸುಮಾರು ೩ ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ಕೊನೆಗೆ ಭಾರತ ಮೇಲುಗೈ ಸಾಧಿಸಿತು. ಕಾರ್ಗಿಲ್ನ ಮುಕುಟದಲ್ಲಿ ತ್ರಿವರ್ಣ ಧ್ವಜ ರಾರಾಜಿಸಿತು.
ಒಟ್ಟಾರೆ ೩ ತಿಂಗಳ ಕಾಲ ನಡೆದ ಯುದ್ಧದಲ್ಲಿ ಎರಡೂ ಕಡೆಯಲ್ಲಿ ಭಾರೀ ಸಾವು ನೋವುಗಳು ಸಂಭವಿಸಿದವು. ಪಾಕಿಸ್ತಾನ ತನ್ನ ನಷ್ಟದ ಬಗ್ಗೆ ಬೇರೆ ಬೇರೆ ಅಂಕಿ ಅಂಶಗಳನ್ನು ನೀಡಿತು. ೩೫೭ ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ಪಾಕಿಸ್ತಾನದ ಮಾತನ್ನು ಅಲ್ಲಿನ ಅಧಿಕಾರಿ ವರ್ಗವೇ ಅಲ್ಲಗಳೆಯಿತು. ಯುದ್ಧದಲ್ಲಿ ಸುಮಾರು ೪ ಸಾವಿರಕ್ಕೂ ಅಧಿಕ ಮಂದಿ ಹತರಾಗಿದ್ದಾರೆ ಎಂದು ಅಧಿಕಾರಿಗಳು ವಾದಿಸಿದರು. ೬೬೫ಕ್ಕೂ ಹೆಚ್ಚು ಮಂದಿ ಗಾಯಗೊಂಡು ೮ ಮಂದಿ ಸೆರೆಸಿಕ್ಕಿದ್ದಾರೆಂದು ಪಾಕಿಸ್ತಾನ ದೃಢಪಡಿಸಿತು. ಆದರೂ ಪಾಕಿಸ್ತಾನಕ್ಕಾದ ನಷ್ಟವನ್ನು ಅಂದಾಜಿಸುವದೇ ಕಷ್ಟಸಾಧ್ಯವಾಗಿತ್ತು. ಅಂದಿನ ಪಾಕಿಸ್ತಾನಿ ಪ್ರಧಾನಿ ನವಾಜ್ ಷರೀಫ್ ಸುಮಾರು ೪ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದರು. ಅವರ ಪಕ್ಷವಾದ ಮುಸ್ಲಿಂ ಲೀಗ್ ಯುದ್ಧ ಕುರಿತ ಶ್ವೇತಪತ್ರದಲ್ಲಿ ೩ ಸಾವಿರಕ್ಕೂ ಅಧಿಕ ಮುಜಾಹಿದ್ದೀನ್ಗಳು, ಅಧಿಕಾರಿಗಳು ಹಾಗೂ ಸೈನಿಕರು ಹತರಾಗಿದ್ದಾರೆಂದು ವಿವರಿಸಿತು. ಒಟ್ಟಾರೆ ಕಾರ್ಗಿಲ್ ಮೇಲೆ ಕಣ್ಣಿಟ್ಟ ಪಾಕಿಸ್ತಾನ ತನ್ನ ದೇಶದ ಸಾವಿರಾರು ಮಂದಿ ಸೈನಿಕರನ್ನು ಕಳೆದುಕೊಳ್ಳಬೇಕಾಯಿತು.
ಇದೇ ಯುದ್ಧಕ್ಕೆ ಸಂಬAಧಿಸಿದAತೆ ಭಾರತವು ಸುಮಾರು ೧೦೪೨ ಪಾಕಿಸ್ತಾನಿ ಸೈನಿಕರು ಹತರಾಗಿದ್ದು, ೮ ಮಂದಿ ಸೆರೆಸಿಕ್ಕಿದ್ದಾರೆಂದು ವಿವರಣೆ ನೀಡಿತು. ಭಾರತದ ೫೨೭ ಸೈನಿಕರು ಸಾವನ್ನಪ್ಪಿ, ೧೩೬೩ ಸೈನಿಕರು ಗಾಯಗೊಂಡು ಓರ್ವ ಪೈಲಟ್ ಮಾತ್ರ ಪಾಕಿಸ್ತಾನಕ್ಕೆ ಸೆರೆಸಿಕ್ಕರು. ಕಾರ್ಗಿಲ್ ಯುದ್ಧ ನಂತರ ೧೯೯೯ರ ಆಗಸ್ಟ್ ೧೩ರಂದು ಸೆರೆಸಿಕ್ಕವರನ್ನು ಸ್ವದೇಶಕ್ಕೆ ವಾಪಸ್ ಕಳುಹಿಸಲಾಯಿತು.
ಒಟ್ಟಾರೆ ಭಾರತೀಯ ಸೈನ್ಯದ ಪಾಲಿಗೆ ಕಾರ್ಗಿಲ್ ಯುದ್ಧ ಮಹತ್ತರ ಅಧ್ಯಾಯವಾಯಿತು. ತಮ್ಮ ನೆಲೆಗಳನ್ನು ಆಕ್ರಮಿಸಿಕೊಂಡಿದ್ದ ಪಾಕಿಸ್ತಾನಿ ಸೈನಿಕರಿಗೆ ಸರಿಯಾದ ಬುದ್ಧಿ ಕಲಿಸಿದ ಸಾರ್ಥಕ್ಯ ಭಾವ ಎಲ್ಲೆಡೆ ಮನೆ ಮಾಡಿತು. ಯುದ್ಧದಲ್ಲಿ ಸಾವನ್ನಪ್ಪಿದ ಭಾರತೀಯ ಸೈನಿಕರಿಗೆ ದೇಶಕ್ಕೆ ದೇಶವೇ ಶ್ರದ್ಧಾಂಜಲಿ ಸಲ್ಲಿಸಿತು. ಹೀಗೆ ಕಾರ್ಗಿಲ್ ಯುದ್ಧ ಇತಿಹಾಸದ ಪುಟದಲ್ಲಿ ದಾಖಲಾಯಿತು. ಜುಲೈ ೨೬ ಕಾರ್ಗಿಲ್ ವಿಜಯೋತ್ಸವ ದಿವಸ್ ಆಯಿತು.
ಕಾರ್ಗಿಲ್ ಯುದ್ಧದಲ್ಲಿ ದೇಶದ ೫೨೭ ಸೈನಿಕರ ಪೈಕಿ ಕೊಡಗಿನ ಮೂವರು ಯೋಧರು ವೀರಮರಣ ಹೊಂದಿದರು. ವೀರಾಜಪೇಟೆ ಮೈತಾಡಿಯ ಕಾವೇರಪ್ಪ, ಮೂಲತಃ ರಾಮನಾಥಪುರದವರಾಗಿದ್ದು, ಕೊಡಗಿನ ಕುಶಾಲನಗರ ವ್ಯಾಪ್ತಿಯ ಎಸ್ಟೇಟ್ವೊಂದರಲ್ಲಿ ನೆಲೆಸಿದ್ದ ವೆಂಕಟ್ ಹಾಗೂ ಸೋಮವಾರಪೇಟೆಯ ಕಿರಗಂದೂರು ಗ್ರಾಮದ ಸಿಂಗೂರು ಮೇದಪ್ಪ ಅವರುಗಳು ರಾಷ್ಟç ರಕ್ಷಣೆ ಕಾರ್ಯದಲ್ಲಿದ್ದಾಗಲೇ ಮರಣ ಹೊಂದಿದರು.
ನಾವುಗಳAತೂ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಲಿಲ್ಲ; ಕಡೇ ಪಕ್ಷ ದೇಶಕ್ಕಾಗಿ ಪ್ರಾಣತೆತ್ತ ಮಹಾನ್ ಚೇತನಗಳನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ಕ್ಷಣಕಾಲ ಮೌನವಾಗೋಣವೇ?
- ವಿಜಯ್ ಹಾನಗಲ್