ಕಣಿವೆ, ಜು. ೨೨: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರಿಯಾದ ಪಾಠ ಪ್ರವಚನಗಳು ನಡೆಯದಿರುವುದ ರಿಂದ ೧, ೩ ಹಾಗೂ ೫ನೇ ಸೆಮ್‌ಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಉತ್ತೀರ್ಣಗೊಳಿಸಬೇಕೆಂದು ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕುಶಾಲನಗರ ನಾಡ ಕಚೇರಿ ಬಳಿ ಬಂದು ತಹಶೀಲ್ದಾರ್ ಮೂಲಕ ತಾಂತ್ರಿಕ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೂ ಎರಡು ಲಸಿಕೆ ಪೂರ್ಣಗೊಳ್ಳುವ ತನಕ ತರಗತಿ ಆರಂಭಿಸಕೂಡದು. ಹಾಗೆಯೇ ಮೊದಲ ಮತ್ತು ಎರಡನೇ ಸೆಮಿಸ್ಟರ್‌ನಲ್ಲಿರುವ ವಿದ್ಯಾರ್ಥಿಗಳಿಗೆ ವಯಸ್ಸು ೧೮ ತುಂಬದ ಕಾರಣ ಕೋವಿಡ್ ಲಸಿಕೆ ಪ್ರಕ್ರಿಯೆ ಆಗಿರುವುದಿಲ್ಲ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಕೋವಿಡ್ ಲಸಿಕೆ ಪೂರ್ಣಗೊಂಡ ಬಳಿಕ ತರಗತಿಗಳು ಹಾಗೂ ಪರೀಕ್ಷೆಗಳು ನಡೆಯಲಿ. ಇಂದಿನ ಸ್ಥಿತಿಯಲ್ಲಿ ಈ ಹಿಂದೆ ನಡೆಯಬೇಕಿದ್ದ ಐದನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸದೇ ಎಲ್ಲರನ್ನು ಉತ್ತೀರ್ಣಗೊಳಿಸಬೇಕೆಂದು ಕಾಲೇಜು ಪ್ರಾಂಶುಪಾಲರು ಹಾಗೂ ತಾಂತ್ರಿಕ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಾಲೇಜು ವಿದ್ಯಾರ್ಥಿಗಳಾದ ದರ್ಶನ್, ಉಲ್ಲಾಸ್, ದಿಲೀಪ್, ಅಜಿತ್, ಅಭಿಷೇಕ್, ಹರ್ಷಿತ್, ಪ್ರಮೋದಿನಿ, ತಿಲಕ, ರುಕ್ಮಿಣಿ ಮುಂತಾದವರಿದ್ದರು.