ಮಡಿಕೇರಿ, ಜು. ೨೨: ಕುಶಾಲನಗರ ಹಾಗೂ ಪೊನ್ನಂಪೇಟೆ ನೂತನ ತಾಲೂಕು ರಚನೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರಣವಲ್ಲ ಹೋರಾಟಗಾರರ ಕಾರ್ಯಕ್ಷಮತೆ ಹಾಗೂ ನಿರಂತರ ಪ್ರಯತ್ನದಿಂದ ತಾಲೂಕುಗಳ ಘೋಷಣೆಯಾಗಿವೆ ಎಂದು ಸಿ.ಪಿ.ಐ.ಎಂ. ಸಂಚಾಲಕ ಡಾ. ಇ.ರ. ದುರ್ಗಾಪ್ರಸಾದ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕು ರಚನೆಯಾಗಲೇಬೇಕೆಂದು ಹಲವು ವರ್ಷಗಳ ಕಾಲ ಹೋರಾಟಗಾರರು ಹೋರಾಡಿದ್ದಾರೆ. ಆದರೆ, ಕುಶಾಲನಗರ ತಾಲೂಕು ಉದ್ಘಾಟನೆ ಸಂದರ್ಭ ಹೋರಾಟಗಾರರಿಗೆ ಮನ್ನಣೆ ನೀಡದೆ ಅವಮಾನಿಸಲಾಗಿದೆ. ಈ ಸಂದರ್ಭ ಕಂದಾಯ ಸಚಿವ ಆರ್.ಅಶೋಕ್ ಮಾತನಾಡುವ ಸಂದರ್ಭ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ೨೦-೩೦ ಬಾರಿ ಕಚೇರಿಗೆ ಬಂದು ತಾಲೂಕು ರಚನೆಗೆ ವಿನಂತಿಸಿದ್ದಾರೆ ಎಂದು ಹೇಳಿದ್ದಾರೆ. ಅವರದ್ದೇ ಪಕ್ಷದ ವಕ್ತಾರ ಹಲವು ದಶಕಗಳ ಹೋರಾಟ ಫಲವಾಗಿ ತಾಲೂಕು ರಚನೆಯಾಗಿದೆ ಎನ್ನುತ್ತಾರೆ. ಅಶೋಕ್ ಅವರ ಹೇಳಿಕೆ ನಿಜಕ್ಕೂ ಹಾಸ್ಯಸ್ಪದ ಎಂದು ವ್ಯಂಗ್ಯವಾಡಿದರು.

ನೂತನ ತಾಲೂಕು ರಚನೆಯಲ್ಲಿ ಹೋರಾಟಗಾರರ ಪಾತ್ರ ಅಪಾರವಾಗಿದೆ. ಈ ಸಂಬAಧ ಸ್ಥಳೀಯ ಸಮಿತಿಗಳು ಹಗಲಿರುಳು ನಿರಂತರವಾಗಿ ಶ್ರಮಿಸಿವೆ. ಕೊಡಗಿನ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಮಂತ್ರಿಯಾಗಿದ್ದಾಗ ಹಾಗೂ ಕೆ.ಜಿ. ಬೋಪಯ್ಯ ಸಭಾಧ್ಯಕ್ಷರಾಗಿದ್ದಾಗ ತಾಲೂಕು ರಚನೆ ಮಾಡಲು ಯಾಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರು.

ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕು ರಚನೆಗೆ ಜಾತ್ಯತೀತ ಜನತಾದಳ ಮೂಲ ಕಾರಣವಾಗಿದೆ. ಇದರಲ್ಲಿ ಅರಣ್ಯ ನಿಗಮದ ಮಾಜಿ ಉಪಾಧ್ಯಕ್ಷೆ, ಜೆಡಿಎಸ್ ಮುಖಂಡರಾದ ಮಾಂಗೇರ ಪದ್ಮಿನಿ ಪೊನ್ನಪ್ಪ ಅವರ ಕೊಡುಗೆ ಕೂಡ ಹೆಚ್ಚಿದೆ. ಅಂದಿನ ಹೋರಾಟಗಾರರ ಬೇಡಿಕೆಗೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಂದನ ನೀಡಿದ್ದಾರೆ. ಹೀಗಾಗಿ ತಾಲೂಕು ಉದ್ಘಾಟನೆ ಸಂದರ್ಭ ಹೋರಾಟಗಾರರನ್ನು ಪರಿಗಣಿಸಿ ಗೌರವಿಸಬೇಕಾಗಿತ್ತು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘಟನೆ ಪ್ರಮುಖ ಎ.ಸಿ. ಸಾಬು ಇದ್ದರು.