ಒಲಿಂಪಿಕ್ಸ್: ಭಾರತೀಯ ದಳ ಮುನ್ನಡೆಸಿದ ಮೇರಿಕೋಮ್
ಟೋಕಿಯೋ, ಜು. ೨೩: ಟೋಕಿಯೋ ಒಲಂಪಿಕ್ಸ್ ಉದ್ಘಾಟನಾ ಸಮಾರಂಭದ ಪರೇಡ್ ನಲ್ಲಿ ಭಾರತೀಯ ದಳವನ್ನು ವಿಶ್ವಚಾಂಪಿಯನ್ ಮೇರಿ ಕೋಮ್ ಹಾಗೂ ಪುರುಷರ ಹಾಕಿ ವಿಭಾಗದ ನಾಯಕ ಮನ್ಪ್ರೀತ್ ಸಿಂಗ್ ಮುನ್ನಡೆಸಿದ್ದಾರೆ. ಭಾರತೀಯ ಕ್ರೀಡಾಪಟುಗಳ ತಂಡ ಒಲಂಪಿಕ್ಸ್ ಕ್ರೀಡಾಂಗಣ ಪ್ರವೇಶಿಸುತ್ತಿದ್ದಂತೆಯೇ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭಾರತದ ಧ್ವಜವನ್ನು ಪ್ರದರ್ಶಿಸುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದರು. ಕೋವಿಡ್-೧೯ ಆತಂಕಗಳ ನಡುವೆಯೇ ಜಪಾನ್ ನ ರಾಜಧಾನಿಯಲ್ಲಿ ೨೫ ಸದಸ್ಯರನ್ನೊಳಗೊಂಡ ಭಾರತೀಯ ತಂಡ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿತ್ತು. ಶುಕ್ರವಾರದ ಸಂಜೆ ನಡೆದ ಸಮಾರಂಭದಲ್ಲಿ ಭಾಗಿಯಾಗಿದ್ದವರ ಪೈಕಿ ಅಂಕಿತ ರೈನಾ ಅವರನ್ನು ಕ್ರೀಡಾಪಟುಗಳ ಪಟ್ಟಿಗೆ ಸೇರಿಸಲಾಗಿದ್ದು, ಟೇಬಲ್ ಟೆನ್ನೀಸ್ ತಂಡದಿAದ ಮನಿಕಾ ಬಾತ್ರ ಹಾಗೂ ಶರತ್ ಕಮಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಅಮಿತ್, ಆಶಿಶ್ ಕುಮಾರ್, ಮೇರಿ ಕೋಮ್ ಅವರು ಭಾರತದ ೬ ಅಧಿಕಾರಿಗಳು ಹಾಗೂ ೮ ಬಾಕ್ಸರ್ ಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕೋವಿಡ್-೧೯: ರಾಜ್ಯದಲ್ಲಿಂದು ೧೭೦೫ ಹೊಸ ಪ್ರಕರಣಗಳು ಪತ್ತೆ
ಬೆಂಗಳೂರು, ಜು. ೨೩: ಕಳೆದ ೨೪ ಗಂಟೆಗಳಲ್ಲಿ ರಾಜ್ಯದಲ್ಲಿ ೧೭೦೫ ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ೨೮೯೧೬೯೯ಕ್ಕೆ ಏರಿಕೆಯಾಗಿದೆ. ೨೨೪೩ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ ೨೮೩೧೨೨೬ಕ್ಕೆ ಏರಿಕೆಯಾಗಿದೆ. ಸೋಂಕಿನಿAದಾಗಿ ೩೦ ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಮೃತರ ಸಂಖ್ಯೆ ೩೬೩೨೩ ಆಗಿದೆ. ರಾಜ್ಯದಲ್ಲಿ ಸದ್ಯ ೨೪೧೨೭ ಸಕ್ರಿಯ ಪ್ರಕರಣಗಳಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಸೋಂಕಿನ ಶೇಕಡಾವಾರು ಪ್ರಮಾಣ ಶೇ. ೧.೩೫ ರಷ್ಟಿದ್ದು, ಮರಣ ಪ್ರಮಾಣ ಶೇ. ೧.೭೫ ರಷ್ಟಿದೆ. ಬೆಂಗಳೂರಿನಲ್ಲಿ ೪೦೦ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ೧೨೨೪೦೪೪ಕ್ಕೆ ಏರಿಕೆಯಾಗಿದೆ.ಸೋಂಕಿನಿAದ ಇಂದು ೭೮೧ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ.
ಅತಿವೃಷ್ಟಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಿಎಂ ಸಂವಾದ
ಬೆAಗಳೂರು, ಜು. ೨೩: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಸಂಜೆ ಅತಿವೃಷ್ಟಿಯಾಗುತ್ತಿರುವ ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು ಹಾಗೂ ಧಾರವಾಡ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಹೆಚ್ಚಿನ ಮಳೆಯಿಂದ ತಲೆದೋರಿರುವ ಪ್ರವಾಹ ಪರಿಸ್ಥಿತಿ ಹಾಗೂ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮುಖ್ಯಮಂತ್ರಿ ಮಾಹಿತಿ ಪಡೆದರು. ಪ್ರವಾಹ ಪೀಡಿತ ಗ್ರಾಮಗಳ ಗ್ರಾಮಸ್ಥರನ್ನು ಶೀಘ್ರವೇ ತೆರುವುಗೊಳಿಸಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ಹಾಗೂ ಪ್ರವಾಹ ಉಂಟಾಗುವ ಸಾದ್ಯತೆ ಇರುವ ಗ್ರಾಮಗಳನ್ನು ಸಹ ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸಲು ಎನ್ ಡಿಅರ್ ಎಫ್ ಮತ್ತು ಎಸ್ ಡಿ ಆರ್ ಎಫ್ ತಂಡಗಳನ್ನು ಅಗತ್ಯ ಇರುವ ಜಿಲ್ಲೆಗಳಿಗೆ ತುರ್ತು ಕಳುಹಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.
ಮಠಾಧೀಶರು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು: ಸಿದ್ದರಾಮಯ್ಯ
ಮಂಗಳೂರು, ಜು. ೨೩: ಯಾವುದೇ ಮಠಾಧೀಶರು ರಾಜಕಾರಣಕ್ಕೆ ಕೈಹಾಕಬಾರದು. ಇಲ್ಲಿ ಜನಾಭಿಪ್ರಾಯವೇ ಅಂತಿಮ. ಮಠಾಧೀಶರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದರಿಂದ ಮಠಗಳ ಬಗ್ಗೆ ಜನರಿಗಿರುವ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.ಹಲವು ಮಠಾಧೀಶರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರವಾಗಿ ರ‍್ಯಾಲಿ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಧಾರ್ಮಿಕ ಮುಖಂಡರು ಮತ್ತು ಮಠಾಧೀಶರು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಇಲ್ಲಿ ಜನಾಭಿಪ್ರಾಯವೇ ಅಂತಿಮ ಎಂದರು. ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಮಠಾಧೀಶರು ಯಡಿಯೂರಪ್ಪ ಅವರನ್ನು ಬೆಂಬಲಿಸುವುದರಲ್ಲಿ ತಪ್ಪೇನು ಇಲ್ಲ ಎಂದಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಕ್ಷದ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿ ಮಾಡಲು ನಗರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಯಡಿಯೂರಪ್ಪ ಅವರು ೨೦೧೯ ರ ಪ್ರವಾಹ ಪೀಡಿತರಿಗೆ ಎರಡು ವರ್ಷಗಳಾದರೂ ಇನ್ನೂ ಪರಿಹಾರ ನೀಡಿಲ್ಲ. ಈಗ ಮತ್ತೆ ಭಾರೀ ಮಳೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಎಲ್ಲಾ ಕಡೆ ಮಳೆ ಬಂದು ಜನ, ಜಾನುವಾರಗಳ ಪ್ರಾಣ ಹಾನಿಯಾಗಿದೆ, ಮನೆಗಳು ಬಿದ್ದಿವೆ. ಇಂತಹ ಸಮಯದಲ್ಲಿ ಸರ್ಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡುವ ಬದಲು ಸಿಎಂ ಬದಲಾವಣೆ ಮಾಡುವ ಕೆಲಸದಲ್ಲಿ ಮುಳುಗಿದೆ’ ಎಂದು ಕುಟುಕಿದರು.