ನಮ್ಮ ಕಡೆ ವಿದ್ಯುತ್ ಪೂರೈಕೆ ವ್ಯತ್ಯಯ ಗೊಂಡಿದೆ. ಒಡನೇ ಸರಿಪಡಿಸಿ. ವಿದ್ಯುತ್ ಇಲ್ಲದೆ ಕೆಲವಾರು ದಿನಗಳು ಕಳೆದಿವೆ. ಆದರೂ ಇಲಾಖೆ ಸ್ಪಂದಿಸುತ್ತಿಲ್ಲ. ಕಂಬ ಮುರಿದಿದೆ, ವಯರ್ ಕಟ್ ಆಗಿದೆ. ಟ್ರಾನ್ಸ್ಫಾರ್ಮರ್ ಬಿದ್ದು ಹೋಗಿದೆ. ವಿದ್ಯುತ್ ಇಲ್ಲದೆ ಮಳೆಗಾಲದಲ್ಲೂ ಕುಡಿಯಲು ನೀರು ಇಲ್ಲದಂತಾಗಿದೆ. ಈ ರೀತಿಯಾಗಿ ಮಳೆಗಾಲದ ಈ ಸಂದರ್ಭದಲ್ಲಿ ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಸಮಸ್ಯೆಗಳದ್ದೇ ಮಹಾಪೂರ. ಈ ಸಮಸ್ಯೆಗಳು ಬಹುಶ: ಪ್ರಾಕೃತಿಕವಾಗಿ ಆಗುವ ಬದಲಾವಣೆಗಳಿಂದ ಸಾಧ್ಯವಾಗ ದಂತೆ ಉದ್ಭವವಾಗುವದು ಸಹಜ ಎಂಬದೂ ವಾಸ್ತವ.
ಇಂತಹ ಪರಿಸ್ಥಿಯ ನಡುವೆ ಜನರ ಮನೆ ಮನೆಗಳಿಗೆ ಬೆಳಕನ್ನು ಒದಗಿಸಲು ಅವಿರತವಾಗಿ ಶ್ರಮ ಪಡುವವರಿಗೆ ನಾವು, ನೀವೆಲ್ಲರೂ “ಸಲಾಂ” ಅನ್ನಲೇಬೇಕು. ಸಮಸ್ಯೆಗಳ ಬಗ್ಗೆ ಹೇಳುವದು ಸುಲಭ ಆದರೆ ಅದನ್ನು ಬಗೆ ಹರಿಸುವಲ್ಲಿ ಪಡುವಂತಹ ಪಡಿಪಾಟಲು ಅನುಭವಿಸಿದವರಿ ಗಷ್ಟೇ ಗೊತ್ತು. ಧೋ ಎಂದು ಸುರಿಯುವ ಮಳೆ, ಭಯ ಹುಟ್ಟಿಸು ವಂತಹ ಗಾಳಿ, ಚಳಿಯ ನಡುವೆ ರೈನ್‌ಕೋಟ್, ಹೆಲ್ಮೆಟ್, ಗಂಬೂಟ್ ಧರಿಸಿ ಓಡಾಡುವ ಸೆಸ್ಕ್ನ ಸಿಬ್ಬಂದಿಗಳ ಶ್ರಮ ನಿಜಕ್ಕೂ ಜನ ಮೆಚ್ಚುವಂತದ್ದು.
ಪ್ರಸ್ತುತ ಅವಲಂಬನೆ ಅಧಿಕ
ಈ ಹಿಂದಿನ ವರ್ಷಗಳಿಗಿಂತ ಪ್ರಸ್ತುತದ ವರ್ಷಗಳಲ್ಲಿ ವಿದ್ಯುತ್‌ನ ಅವಲಂಬನೆ ಎಲ್ಲಾ ರೀತಿಯಲ್ಲೂ ಹೆಚ್ಚಾಗಿದೆ. ಇದು ಅನಿವಾರ್ಯವೂ ಕೂಡಾ ಆಗಿದೆ. ಮನೆ-ಕಚೇರಿ ಗಳಿಗಿನ ಅಗತ್ಯತೆ, ಮೊಬೈಲ್‌ನ ಅವಲಂಬನೆ, ನೀರು ಪೂರೈಕೆ ಇನ್ನಿತರ ವ್ಯವಸ್ಥೆಗಳಿಗೆ ಅದರಲ್ಲೂ ವಿದ್ಯಾರ್ಥಿಗಳಿಗೂ ಕೂಡ ವಿದ್ಯುತ್ ಬೇಕೇಬೇಕು.
ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸೆಸ್ಕ್ನ ಸಿಬ್ಬಂದಿಗಳು ಭಾರೀ ಶ್ರಮಪಡುತ್ತಾರೆ. ಗುಡ್ಡ ಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ಸೂಕ್ತ ರಸ್ತೆ ಸಂಪರ್ಕ ಕಷ್ಟ. ಬಹುತೇಕ ಶೇ.೮೦ ರಷ್ಟು ವಿದ್ಯುತ್ ಮಾರ್ಗ ಅರಣ್ಯ ಪ್ರದೇಶ-ತೋಟಗಳ, ಗದ್ದೆಗಳ ನಡುವೆ ಹಾದು ಹೋಗಿರುತ್ತದೆ. ಎಲ್ಲಿ ಸಮಸ್ಯೆ ಉಂಟಾಗಿದೆ ಎಂಬುದನ್ನು ತಿಳಿಯು ವದೇ ದೊಡ್ಡ ಸಾಹಸ ಕೂಡಾ ಆಗಿರುತ್ತದೆ. ಇನ್ನು ಹಲವು ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಕಂಡುಹಿಡಿಯಲು ಪ್ರತಿ ಕಂಬ ದಿಂದ ಕಂಬಕ್ಕೆ ಅಲೆದಾಡಬೇಕಾದ ಪರಿಸ್ಥಿತಿಯೂ ಇರುತ್ತದೆ. ಕೆಲವಾರು ಭಾಗಗಳಿಗೆ ಕಂಬ, ವಯರ್‌ನಂತಹ ಅಗತ್ಯ ಸಾಮಗ್ರಿಗಳನ್ನು ಸಾಗಿಸು ವದೂ ದುಸ್ತರವಾದ ಕೆಲಸ.
ಮಳೆ, ಗಾಳಿಯ ನಡುವೆ ಸಿಬ್ಬಂದಿಗಳೂ ಹೈರಾಣಾಗಿರುತ್ತಾರೆ. ಹೊರಜಿಲ್ಲೆಯ ಸಿಬ್ಬಂದಿಗಳನ್ನು ಹಲವೊಮ್ಮೆ ಬಳಸಿಕೊಳ್ಳಲಾಗುತ್ತದೆ ಯಾದರೂ ಅವರು ಇಲ್ಲಿನ ವಾತಾವರಣಕ್ಕೆ ಒಗ್ಗುವದು ಕಷ್ಟ. ಇದರಿಂದಾಗಿ ಕೆಲವೇ ದಿನಗಳಲ್ಲಿ ಇವರನ್ನು ಹಿಂದೆ ಕಳುಹಿಸಿ ಮತ್ತೆ ಬೇರೆ ಕಡೆಯಿಂದ ಕರೆಸಿಕೊಳ್ಳ ಬೇಕಾಗುತ್ತದೆ ಎಂದು ಅಧಿಕಾರಿ ಯೊಬ್ಬರು ಹೇಳುತ್ತಾರೆ.
ಯಾವದೋ ಸಂದರ್ಭದಲ್ಲಿ ಯಾವದೋ ಜಾಗದಲ್ಲಿ ಕಾಡು, ತೋಟದೊಳಗೆ ಸಮಸ್ಯೆಯಾದಲ್ಲಿ ಆ ಬಗ್ಗೆ ಮಾಹಿತಿ ದೊರಕುವದೂ, ಹುಡುಕುವದೂ ಕಷ್ಟ. ಇದರೊಂದಿಗೆ ಜಿಲ್ಲೆಯಲ್ಲಿನ ನೆಟ್‌ವರ್ಕ್ನ ಸಮಸ್ಯೆ ಮತ್ತೊಂದು ಕಬ್ಬಿಣದ ಕಡಲೆಕಾಯಿಯಂತಾಗಿದೆ. ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಮತ್ತೂ ಸಮಸ್ಯೆ ಇರುತ್ತದೆ.
ಇವೆಲ್ಲದರ ನಡುವೆ ಜನತೆಯ ಸಹಕಾರ, ವಿದ್ಯುತ್ ಗುತ್ತಿಗೆದಾರರ ಸಹಕಾರವÀನ್ನು ಪಡೆದುಕೊಂಡು ವ್ಯವಸ್ಥೆಯನ್ನು ಸರಿಪಡಿಸಲು ಶತ ಪ್ರಯತ್ನ ನಡೆಸಲಾಗುತ್ತದೆ. ಪ್ರಕೃತಿಯಲ್ಲಿನ ಅಸಹಜತೆಯ ನಡುವೆ ಜನತೆಗೆ ಬೆಳಕು ಒದಗಿಸಲು ಶ್ರಮವಹಿಸುವ ಸಿಬ್ಬಂದಿಗಳಿಗೆ ಜನತೆಯ ಪರವಾಗಿ ಅಭಿನಂದನೆಗಳು.
-ಶಶಿ ಸೋಮಯ್ಯ