ಚೆಟ್ಟಳ್ಳಿ, ಜು. ೨೧: ಆರೋಗ್ಯಕರ ಜೀವನಕ್ಕೆ ಸ್ವಚ್ಛ ಪರಿಸರ ಅತ್ಯಗತ್ಯ, ನಮ್ಮ ಪರಿಸರದ ಬಗ್ಗೆ ನಾವು ಹೆಚ್ಚು ಕಾಳಜಿ ವಹಿಸುತ್ತಿಲ್ಲ. ಇದರಿಂದ ನಮ್ಮ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತಿದೆ ಎಂದು ಎಸ್.ಎಸ್.ಎಫ್ ಘಟಕದ ಶಾಖಾ ಅಧ್ಯಕ್ಷ ಆಸಿಫ್ ಅಭಿಪ್ರಾಯಪಟ್ಟರು.

ಚೇರಂಬಾಣೆಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಆಸಿಫ್ ಅವರು ಮಾತನಾಡಿದರು. ನಿರ್ಮಲ ಮನಸ್ಸು, ನೈರ್ಮಲ್ಯ ಪರಿಸರ ಎಂಬ ಶೀರ್ಷಿಕೆಯೊಂದಿಗೆ ಸಾಹಾಯ್ ತಂಡ ರಾಜ್ಯಾದ್ಯಂತ ನಡೆಸಿಕೊಂಡು ಬರುತ್ತಿರುವ ಪರಿಸರ ಸಂರಕ್ಷಣೆ ಕಾರ್ಯವನ್ನು ಚೇರಂಬಾಣೆಯಲ್ಲಿ ನಡೆಸಲಾಯಿತು. ಇದರ ಸಲುವಾಗಿ ಚೇರಂಬಾಣೆ ಮಸೀದಿ - ಮದರಸ ವಠಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಎಸ್.ಎಸ್.ಎಫ್ ವತಿಯಿಂದ ಸ್ವಚ್ಛ ಗೊಳಿಸಲಾಯಿತು.

ವ್ಯಕ್ತಿಯು ಆರೋಗ್ಯವಾಗಿರಲು ಆರೋಗ್ಯಕರ ವಾತಾವರಣ ಬಹಳ ಮುಖ್ಯ. ಸುತ್ತಮುತ್ತಲಿನ ಪ್ರದೇಶಗಳು ಸ್ವಚ್ಛವಾಗಿರಬೇಕು. ಆದ್ದರಿಂದ ನೀವು ಸ್ವಚ್ಛ ಆರೋಗ್ಯಕರ ಗಾಳಿಯಲ್ಲಿ ಉಸಿರಾಡಬಹುದು ಎಂದು ಎಸ್‌ಎಸ್‌ಎಫ್ ಚೇರಂಬಾಣೆ ಕಾರ್ಯದರ್ಶಿಗಳಾದ ರಹೀಂ ಹೇಳಿದರು. ಚೇರಂಬಾಣೆ ಎಸ್ ವೈ ಎಸ್ ಪದಾಧಿಕಾರಿಗಳಾದ ಅಬ್ದುಲ್ ಅಜೀಜ್, ಎಸ್.ಎಸ್.ಎಫ್ ಚೇರಂಬಾಣೆ ಘಟಕದ ಉಪಾಧ್ಯಕ್ಷ ಅಫ್ಸಲ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.