ಸೋಮವಾರಪೇಟೆ, ಜು. ೨೧: ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗ ಬೇಕೆಂದು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕರೆ ನೀಡಿದರು.
ಕೊರೊನಾ ಸಂದರ್ಭ ಸಂಕಷ್ಟ ದಲ್ಲಿದ್ದ ತಾಲೂಕಿನ ನೋಂದಾಯಿತ ಕಾರ್ಮಿಕರಿಗೆ, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಜಿಲ್ಲಾಡಳಿತ, ಜಿ.ಪಂ., ಕಾರ್ಮಿಕ ಇಲಾಖೆಯ ವತಿಯಿಂದ ಸ್ಥಳೀಯ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಅವರು ಮಾತನಾಡಿದರು.
ಕೊರೊನಾ ವೈರಸ್ ಇಡೀ ಪ್ರಪಂಚವನ್ನೇ ಬಾಧಿಸಿದ್ದು, ಲಾಕ್‌ಡೌನ್ ಸಂದರ್ಭ ಆರ್ಥಿಕವಾಗಿ ತೀರಾ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರಿಗೆ ಸರ್ಕಾರದಿಂದ ಆಹಾರ ಸಾಮಗ್ರಿಗಳ ಕಿಟ್ ನೀಡಲಾಗುತ್ತಿದೆ ಎಂದ ಶಾಸಕರು, ಸರ್ಕಾರವು ಕಾರ್ಮಿಕರಿಗೆ ಹಲವು ಸವಲತ್ತು ಗಳನ್ನು ನೀಡುತ್ತಿದ್ದು, ಈ ಬಗ್ಗೆ ಇಲಾಖೆಯಿಂದ ಮಾಹಿತಿ ಪಡೆದು, ಸೌಕರ್ಯ ಹೊಂದಿಕೊಳ್ಳಬೇಕು ಎಂದರು.
ತಾವು ಕೆಲಸ ನಿರ್ವಹಿಸುವ ಸಂದರ್ಭ ಅಗತ್ಯವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕಟ್ಟಡ ನಿರ್ಮಾಣ, ತೋಟ ಕಾರ್ಮಿಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕೊರೊನಾದಿಂದ ದೂರ ಉಳಿಯಲು ಮಾಸ್ಕ್ ಬಳಸಬೇಕೆಂದು ಕಿವಿಮಾತು ಹೇಳಿದರು.
ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಅರ್ಹರು ಇದರ ಪ್ರಯೋಜನ ಪಡೆಯಬೇಕು ಎಂದು ರಂಜನ್ ತಿಳಿಸಿದರು.
ಕಾರ್ಯಕ್ರಮದಲ್ಲಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಮಾತನಾಡಿ, ಕಾರ್ಮಿಕರು ತಮ್ಮ ಸವಲತ್ತುಗಳನ್ನು ಪಡೆಯಲು ಯಾವುದೇ ಮಧ್ಯವರ್ತಿಗಳನ್ನು ಅವಲಂಬಿಸದೇ ನೇರವಾಗಿ ಕಚೇರಿಗೆ ಬರಬೇಕು. ಸರ್ಕಾರದ ಸವಲತ್ತಿಗಾಗಿ ಮೊದಲು ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊAಡು ಗುರುತಿನ ಚೀಟಿ ಪಡೆಯಬೇಕೆಂದರು.
ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ತಾಲೂಕು ಕಾರ್ಮಿಕಾಧಿಕಾರಿ ಲೀನಾ, ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಟ್ಟಣ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಯ ಮೂಲಕ ನೋಂದಾಯಿಸಿಕೊAಡಿರುವ ೨೫೦ ಮಂದಿ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಲಾಯಿತು.