ಕಣಿವೆ, ಜು. ೨೧: ರಾಜ್ಯ ಹೆದ್ದಾರಿ ೯೧ರ ಮುಳ್ಳುಸೋಗೆಯಿಂದ ಒಂದೂವರೆ ಕಿಮೀ ಅಂತರದಲ್ಲಿ ಈಗ ಇರುವ ಹೆದ್ದಾರಿಯ ಮಧ್ಯೆ ವಿಭಜಕ ನಿರ್ಮಿಸಲು ಸರ್ವೆ ಕಾರ್ಯ ನಡೆಯಿತು.
ಈಗಾಗಲೇ ಕೂಡಿಗೆ, ಕೂಡ್ಲೂರು ಕೈಗಾರಿಕಾ ಬಡಾವಣೆ ಹಾಗೂ ಮುಳ್ಳುಸೋಗೆಯಿಂದ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ವೃತ್ತದವರೆಗೆ ರಸ್ತೆ ವಿಭಜಕ ಕಾಮಗಾರಿ ಮಾಡಲಾಗಿದೆ. ಅದೇ ಮಾದರಿಯಲ್ಲಿ ಮತ್ತೆ ಮುಳ್ಳುಸೋಗೆಯಿಂದ ಒಂದೂವರೆ ಕಿಮೀ ತನಕ ಹೆದ್ದಾರಿಯಲ್ಲಿ ವಿಭಜಕ ನಿರ್ಮಿಸುವ ಕಾಮಗಾರಿಗೆ ರೂ. ಮೂರು ಕೋಟಿಯ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಇಲಾಖಾ ಇಂಜಿನಿಯರ್ ಸಾಜನ್ ಪೀಟರ್ ಹೇಳಿದರು.
ಹೆದ್ದಾರಿಯಲ್ಲಿ ವಿಭಜಕ ನಿರ್ಮಿಸಲು ನಡೆಸುತ್ತಿರುವ ಸರ್ವೆ ಯನ್ನು ಕಂಡ ಹೆದ್ದಾರಿ ಬದಿಯ ನಿವಾಸಿಗಳು ಹಾಗೂ ಸ್ವಂತ ಮಳಿಗೆಗಳ ವರ್ತಕರು ಮತ್ತೆ ಹೆದ್ದಾರಿ ಅಗಲೀಕರಣ ವಾಗುತ್ತಾ ಎಂಬ ಆತಂಕದಲ್ಲಿದ್ದರು. ಆದರೆ ಈಗ ಇರುವ ಏಳು ಮೀಟರ್ ರಸ್ತೆಯಲ್ಲಿಯೇ ಮಧ್ಯೆ ವಿಭಜಕ ನಿರ್ಮಿಸ ಲಾಗುವುದು. ಕ್ರಮೇಣ ಅನುದಾನವನ್ನು ಆಧರಿಸಿ ಕೂಡಿಗೆ ಯಿಂದ ಕುಶಾಲನಗರದವರೆಗೆ ಸಂಪೂರ್ಣ ವಿಭಜಕ ನಿರ್ಮಿಸಲಾಗುತ್ತದೆ ಎಂದು ಪೀಟರ್ ತಿಳಿಸಿದ್ದಾರೆ.