ಮಡಿಕೇರಿ, ಜು. ೨೧: ಚೆಂಬು ಗ್ರಾಮದ ಸರ್ಕಾರಿ ಪ್ರೌಢಶಾಲೆಯಿಂದ ಅನ್ಯಾಳ ಗ್ರಾಮವನ್ನು ಸೇರುವ ರಸ್ತೆಗಳ ಪಾಡು ಯಾರು ಕೇಳುವವರಿಲ್ಲ. ಈ ರಸ್ತೆಯ ಡಾಮರ್‌ಗಳು ಕಿತ್ತು ಹೋಗಿದ್ದು, ಹೊಂಡ, ಗುಂಡಿಗಳೇ ಹೆಚ್ಚಾಗಿವೆ. ಈ ರಸ್ತೆಯಲ್ಲಿ ದಿನನಿತ್ಯ ಕಾರ್ಯಗಳಿಗೆ ತೆರಳುವ ಅದೆಷ್ಟೋ ಮಂದಿಗಳಿಗೆ ಈ ರಸ್ತೆಯನ್ನು ದಾಟಿ ಮುಂದಕ್ಕೆ ಹೋಗುವುದೇ ದೊಡ್ಡ ಸಮಸ್ಯೆ ಆಗಿದೆ. ಚೆಂಬು ಸರ್ಕಾರಿ ಪ್ರೌಢಶಾಲೆಯ ಸ್ವಲ್ಪ ಹಿಂದಕ್ಕೆ ಹೋದಂತೆ ಈ ರಸ್ತೆಯಲ್ಲಿ ಅದೆಷ್ಟೋ ವಾಹನಗಳು ಬಿದ್ದು ಜನರಿಗೆ ಗಾಯಗಳಾಗಿವೆ. ಯಾರು ಈ ಸಮಸ್ಯೆಗೆ ಸ್ಪಂದಿಸುವುದಿಲ್ಲ ಹಾಗೂ ಪರಿಹಾರ ಹುಡುಕಲು ಮುಂದೆ ಬರುತ್ತಿಲ್ಲ. ಚೆಂಬು ಗ್ರಾಮದ ಹೇಮಚಂದ್ರ ಅವರ ಮನೆಯ ಎದುರಿನ ರಸ್ತೆಯು ಎತ್ತರದಲ್ಲಿದ್ದು, ಇಲ್ಲಿ ವಾಹನಗಳು ಹೆಚ್ಚಾಗಿ ಓಡಾಡುತ್ತವೆ. ಆದರೆ ಇಲ್ಲಿ ತೆರಳಲು ಭಯ ಪಡುವ ಪರಿಸ್ಥಿತಿ ಉಂಟಾಗಿದೆ. ಇಲ್ಲಿ ಡಾಮರಿಕರಣ ಸಂಪೂರ್ಣವಾಗಿ ಹಾಳಾಗಿದ್ದು, ಹೊಂಡಗಳೇ ಹೆಚ್ಚಾಗಿವೆ.

ವಿದ್ಯಾರ್ಥಿಗಳ ಗೋಳು

ಅನ್ಯಾಳ, ದಬ್ಬಡ್ಕ , ಊರುಬೈಲು ಮುಂತಾದ ಸ್ಥಳಗಳಿಂದ ಶಾಲೆಗೆ ಬರುವ ವಿದ್ಯಾರ್ಥಿಗಳು ಈ ರಸ್ತೆಯಲ್ಲಿಯೇ ಬರಬೇಕು. ಈ ರಸ್ತೆಯಲ್ಲಿ ಮಕ್ಕಳನ್ನು ಕಳುಹಿಸಲು ಪೋಷಕರಿಗೆ ಭಯ ಉಂಟಾಗಿದೆ. ಸಣ್ಣ ಮಕ್ಕಳು, ದೊಡ್ಡ ಮಕ್ಕಳು ಅನೇಕ ವಿದ್ಯಾರ್ಥಿ ಗಳು ಇದೇ ಹೊಂಡ, ಗುಂಡಿಯಲ್ಲಿ ನಡೆದುಕೊಂಡು ಬರುವುದು ಕಷ್ಟಕರವಾಗಿದೆ. ಮಳೆಗಾಲದಲ್ಲಂತೂ ಗುಂಡಿಗಳಲ್ಲಿ ಕೆಸರುಗಳು ತುಂಬಿ ವಾಹನಗಳು ಹೋದಾಗ ಮಕ್ಕಳ ಮೇಲೆ ಕೆಸರುರೆಚಿ ಒದ್ದೆ ಯಾಗುತ್ತಾರೆ. ರಸ್ತೆಯಲ್ಲಿ ಜೆಲ್ಲಿ ಕಲ್ಲುಗಳು ಬಿದ್ದು ನಡೆದು ಹೋಗುವುದೇ ಮಕ್ಕಳಿಗೆ ತೊಂದರೆಯಾಗಿದೆ. ವಾಹನಗಳಲ್ಲಿ ಬರುವ ವಿದ್ಯಾರ್ಥಿಗಳು ಬಿದ್ದು ಗಾಯಗಳಾಗಿವೆ. ಪ್ರೌಢಶಾಲೆಯ ಬಳಿ ಇರುವ ರಸ್ತೆಗೆ ಚರಂಡಿ ವ್ಯವಸ್ಥೆ ಇಲ್ಲದೆ, ಮಣ್ಣು ರಸ್ತೆಯ ಮಧ್ಯೆ ರಾಶಿಯಾಗಿವೆ.