ಮಡಿಕೇರಿ, ಜು. ೨೧: ಕೊಡಗು ಜಿಲ್ಲೆಯಲ್ಲಿ ಮತ್ತೊಮ್ಮೆ ವಾಯು - ವರುಣನ ಅಬ್ಬರ ಹೆಚ್ಚಾಗುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ. ಕಳೆದ ರಾತ್ರಿಯಿಂದ ಬಹುತೇಕ ಜಿಲ್ಲೆಯಾದ್ಯಂತ ವಾಯು - ವರುಣನ ಅಬ್ಬರ ಹೆಚ್ಚಾಗಿದೆ. ತಾ. ೨೧ರ ಬುಧವಾರದಿಂದ ಆರ್ದ್ರಾ ಮಳೆ ನಕ್ಷತ್ರ ಆರಂಭಗೊAಡಿದ್ದು, ಇಂದು ದಿನವಿಡೀ ಗಾಳಿ ಸಹಿತವಾಗಿ ಭಾರೀ ಮಳೆಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಬಹುತೇಕ ಇಡೀ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿರುವ ಕುರಿತು ವರದಿಯಾಗಿದೆ. ಇದರಿಂದಾಗಿ ನದಿ - ತೊರೆಗಳಲ್ಲಿ ಮತ್ತೊಮ್ಮೆ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಈ ದಿನ ನಿರಂತರ ಮಳೆ - ಗಾಳಿಯಾಗಿದ್ದರೂ, ಎಲ್ಲೂ ಯಾವುದೇ ಅನಾಹುತಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಗುರುವಾರದ ಚಿತ್ರಣ ಜನತೆಯಲ್ಲಿ ಮತ್ತೆ ಆತಂಕದ ಸನ್ನಿವೇಶಕ್ಕೆ ಎಡೆಯಾಗಿದೆ.

ಸೋಮವಾರಪೇಟೆ

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಾಯು ವರುಣನ ಆರ್ಭಟ ಜೋರಾಗಿದ್ದು, ಜನಜೀವನ ತತ್ತರಿಸಿದೆ. ಭಾರೀ ಗಾಳಿಯೊಂದಿಗೆ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಶಾAತಳ್ಳಿ ಹೋಬಳಿಯಾದ್ಯಂತ ದಿನದ ೨೪ ಗಂಟೆಯೂ ಮಳೆಯಾಗುತ್ತಿದೆ. ಪುಷ್ಪಗಿರಿ ಬೆಟ್ಟಶ್ರೇಣಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನರು ಮನೆಯಿಂದ ಹೊರಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಜೋರಾದ ಗಾಳಿಯೂ ಬೀಸುತ್ತಿರುವುದರಿಂದ ಮರಗಳು ನೆಲಕ್ಕುರುಳುತ್ತಿದ್ದು, ವಿದ್ಯುತ್ ಸಮಸ್ಯೆ ಸೃಷ್ಟಿಯಾಗಿದೆ.

ಪುಷ್ಪಗಿರಿ ತಟದಲ್ಲಿರುವ ಕುಡಿಗಾಣ, ಕೊತ್ನಳ್ಳಿ, ನಾಡ್ನಳ್ಳಿ ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ವಾತಾವರಣವೂ ಅತೀ ಶೀತದಿಂದ ಕೂಡಿದ್ದು, ಗದ್ದೆ ತೋಟ, ಬೆಟ್ಟದ ತಟದಲ್ಲಿ ಜಲದ ಬುಗ್ಗೆಗಳು ಸೃಷ್ಟಿಯಾಗಿವೆ.

ಈ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಕುಡಿಗಾಣ ಗ್ರಾಮ ಹೊರ ಜಗತ್ತಿನ ಸಂಪರ್ಕ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕುಡಿಗಾಣ ಹೊಳೆಯಲ್ಲಿ ನೀರಿನ ಹರಿವಿನ ಪ್ರಮಾಣ ಅಧಿಕವಾಗಿದ್ದು, ಹೊಳೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮುಳುಗಡೆಯಾಗುವ ಸಂಭವವಿದೆ. ಹೊಳೆಯ ನೀರು ಅಕ್ಕಪಕ್ಕದ ಗದ್ದೆಗಳಿಗೆ ನುಗ್ಗಿ ಜಲಾವೃತಗೊಂಡಿವೆ.

ಶನಿವಾರಸAತೆ ಸೇರಿದಂತೆ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಳ್ಳಿ, ಹರಗ, ಬೀದಳ್ಳಿ, ಕುಂದಳ್ಳಿ, ಮಲ್ಲಳ್ಳಿ, ತೋಳೂರುಶೆಟ್ಟಳ್ಳಿ, ಕೂತಿ, ಹೊಸೂರು, ದುಂಡಳ್ಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಪಶ್ಚಿಮಘಟ್ಟ ಶ್ರೇಣಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಕೆರೆಕಟ್ಟೆ, ಹೊಳೆ, ನದಿ ತೊರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಭಾರೀ ಗಾಳಿಯೂ ಬೀಸುತ್ತಿರುವುದರಿಂದ ಗದ್ದೆ, ತೋಟಗಳಲ್ಲಿ ತಾತ್ಕಾಲಿಕವಾಗಿ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ.

ಕಳೆದ ೨೪ ಗಂಟೆಗಳಲ್ಲಿ ಸೋಮವಾರಪೇಟೆ ವ್ಯಾಪ್ತಿಯಲ್ಲಿ ೩೧.೦ ಮಿ.ಮೀ., ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ೧೧.೪, ಶನಿವಾರಸಂತೆಗೆ ೨೯, ಶಾಂತಳ್ಳಿಗೆ ೫೩.೨, ಸುಂಟಿಕೊಪ್ಪಕ್ಕೆ ೩೩, ಕುಶಾಲನಗರಕ್ಕೆ ೭.೪ ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.