ಮಡಿಕೇರಿ, ಜು. ೨೦: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯ ಎಲ್ಲಾ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮತದಾರರ ಪಟ್ಟಿಗಳನ್ನು ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯ ಡೇಟಾವನ್ನು ಅಳವಡಿಸಿಕೊಂಡು ಭಾವಚಿತ್ರ ಇರುವ ಮತದಾರರ ಪಟ್ಟಿಯನ್ನು ತಯಾರಿಸಿ ಅಂತಿಮ ಮತದಾರರ ಪಟ್ಟಿಯನ್ನು ಜೂನ್ ೨೮ ರಂದು ಪ್ರಕಟಿಸಲಾಗಿದೆ. ಮತದಾರರ ಪಟ್ಟಿಯ ಪ್ರತಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿ, ತಾಲೂಕು ಕಚೇರಿ, ತಾಲೂಕು ಪಂಚಾಯಿತಿ ಕಚೇರಿ, ನಾಡ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿ ಮತ್ತು ಕ್ಷೇತ್ರಗಳ ಮತಗಟ್ಟೆಗಳಲ್ಲಿ ಸಾರ್ವಜನಿಕರ ಪರಿಶೀಲನೆಗೆ ಲಭ್ಯವಿದ್ದು, ತಮ್ಮ ಹೆಸರು ಮತ್ತು ಕುಟುಂಬದ ಸದಸ್ಯರ ಹೆಸರು ತಮ್ಮ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಪರಿಶೀಲಿಸಿ ಖಚಿತಪಡಿಕೊಳ್ಳಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕೋರಿದ್ದಾರೆ. ಹೆಸರು ಸೇರ್ಪಡೆ ಆಗದಿದ್ದಲ್ಲಿ ನಮೂನೆ-೬ರಲ್ಲಿ ಅರ್ಜಿಯನ್ನು ಬೂತ್ ಮಟ್ಟದ ಅಧಿಕಾರಿ ಅಥವಾ ತಾಲೂಕು ಕಚೇರಿಗೆ ಸಲ್ಲಿಸಿ ಹೆಸರು ನೋಂದಣಿ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.