ಕೂಡಿಗೆ, ಜು. ೨೦: ಜಿಲ್ಲೆಯ ಪ್ರಮುಖ ಅಣೆಕಟ್ಟೆಯ ಹಾರಂಗಿ ಅಣೆಕಟ್ಟೆಯು ಭರ್ತಿಯಾಗುವ ಸಂದರ್ಭದಲ್ಲಿ ಅಣೆಕಟ್ಟೆಯ ಅಚ್ಚುಕಟ್ಟು ವ್ಯಾಪ್ತಿಯ ಸಾವಿರಾರು ಎಕರೆಗಳಷ್ಟು ಪ್ರದೇಶಗಳಿಗೆ ಮುಖ್ಯ ನಾಲೆಯ ಮೂಲಕ ನೀರು ಹರಿಸಿ ಬೇಸಾಯ ಮಾಡಲು ಅನೇಕ ವರ್ಷಗಳಿಂದಲೂ ಅನುಕೂಲ ಮಾಡಿ ಕೊಡಲಾಗುತ್ತಿದೆ. ಅದರಂತೆ ಈ ತಿಂಗಳ ಕೊನೆಯ ವಾರದಲ್ಲಿ ಮುಖ್ಯ ನಾಲೆಗೆ ಮೊದಲ ಹಂತದ ನೀರನ್ನು ಹರಿಸಲಾಗುವುದು. ನೀರು ಕಾಲುವೆಗಳಲ್ಲಿ ಬರುವ ಹಿನ್ನೆಲೆ ಅಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ ತಮ್ಮ ಗದ್ದೆಗಳಲ್ಲಿ ಬೀಜದ ಹೈಬ್ರೀಡ್ ತಳಿಯ ಭತ್ತದ ಸಸಿ ಮಡಿಗಳಿಗೆ ಬಿತ್ತನೆ ಮಾಡಿ ಸಸಿಗಳನ್ನು ಸಿದ್ಧತೆ ಮಾಡಿಕೊಳ್ಳುವುದರಲ್ಲಿ ತೊಡಗಿದ್ದಾರೆ. ಈ ವ್ಯಾಪ್ತಿಯ ರೈತರು ಭತ್ತದ ಸಸಿಗಳನ್ನು ಗದ್ದೆಗಳಿಗೆ ನಾಟಿ ಮಾಡಲು ೨೫ ದಿನಗಳಿಂದ ೩೦ ದಿನಗಳ ಅಂತರದಲ್ಲಿ ಬೆಳೆದ ಸಸಿಗಳನ್ನು ನಾಟಿ ಮಾಡುವುದರಿಂದ ಉತ್ತಮವಾಗಿ ಭತ್ತದ ಬೆಳೆ ಬರಲು ಸಾಧ್ಯ ಮತ್ತು ಭತ್ತದ ಕಾಳುಕಟ್ಟುವಿಕೆಯಿಂದ ಉತ್ತಮವಾದ ಬೆಳೆಯು ಬರುತ್ತದೆ.

ಕೊಡಗಿನ ಗಡಿಭಾಗದ ಅಚ್ಚುಕಟ್ಟು ಪ್ರದೇಶದ ರೈತರು ಆಯಾ ಭಾಗದ ಸಹಕಾರ ಸಂಘಗಳಲ್ಲಿ ಕೃಷಿ ಇಲಾಖೆಯ ವತಿಯಿಂದ ಪರಿಷ್ಕೃತಗೊಂಡ ವಿವಿಧ ಕಂಪೆನಿಯ ಹೈಬ್ರೀಡ್ ತಳಿಯ ಭತ್ತದ ಬೀಜವನ್ನು ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಅದರಂತೆ ರೈತರು ಜಮೀನಿನ ದಾಖಲೆಯನ್ನು ನೀಡಿ ವಿವಿಧ ಕಂಪೆನಿಯ ಬಿತ್ತನೆ ಬೀಜದ ಭತ್ತವನ್ನು ಪಡೆದು ಸಸಿಮಡಿಗಳನ್ನು ಮಾಡುವುದರಲ್ಲಿ ತೊಡಗಿದ್ದಾರೆ.