ವೀರಾಜಪೇಟೆ, ಜು. ೧೯: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಐರಾವತ ಬಸ್ ಬ್ರೇಕ್ ವಿಫಲಗೊಂಡು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ವೀರಾಜಪೇಟೆ ಮಾಕುಟ್ಟ ಬಳಿ ನಡೆದಿದೆ. ಟಿ. ನರಸಿಪುರ ತಾಲೂಕಿನ ಕೊಳತ್ತೂರಿನ ರಾಜು ಎಂಬವರ ಪುತ್ರ ಸ್ವಾಮಿ (೪೩) ಮೃತ ದುರ್ದೈವಿ.

ಬೆಂಗಳೂರಿನ ಶಾಂತಿನಗರ ಡಿಪ್ಪೋಗೆ ಸೇರಿದ ಐರಾವತ ಬಸ್ಸ್ ತಾ. ೧೮ರ ರಾತ್ರಿ ೧೧ ಗಂಟೆಗೆ ಬೆಂಗಳೂರಿನಿAದ ಹೊರಟು ಮೈಸೂರು ವೀರಾಜಪೇಟೆ ಮಾರ್ಗವಾಗಿ ಕೇರಳ ರಾಜ್ಯದ ಕಣ್ಣನೂರು ಕಡೆ ತೆರಳುತ್ತಿದ್ದಾಗ ಸೋಮವಾರ ಬೆಳಗ್ಗಿನ ಜಾವ ೪.೪೫ರ ಸಮಯದಲ್ಲಿ ಮಾಕುಟ್ಟ ಸಮೀಪ ಇಳಿಜಾರು ಪ್ರದೇಶದಲ್ಲಿ ಬ್ರೇಕ್ ವಿಫಲಗೊಂಡಿದೆ. ಚಾಲಕ ಎಷ್ಟೇ ನಿಯಂತ್ರಿಸಿದರೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನಿಗೆ ಗಂಭೀರ ಸ್ವರೂಪದ ಗಾಯಗಳಾದ ಕಾರಣ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಘಟನೆ ನಡೆದ ಕೆಲ ಕ್ಷಣದಲ್ಲಿ ವೀರಾಜಪೇಟೆ ಪೊಲೀಸರು ನೇರವಾಗಿ ಸಮಾಜ ಸೇವಕ ಚುಪ್ಪ ನಾಗರಾಜ್ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಕೂಡಲೇ ಪಟ್ಟಣ ಪಂಚಾಯಿತಿ ಸದಸ್ಯ ಮಹಮದ್ ರಾಫಿ, ಶಬೀರ್, ರಜಾಕ್, ಗಿರೀಶ್ ಎಂಬವರುಗಳು ೨ ಆ್ಯಂಬ್ಯುಲೆನ್ಸ್ ಸಮೇತ ಸ್ಥಳಕ್ಕೆ ತೆರಳಿದ್ದಾರೆ. ಬಸ್ ಮರಕ್ಕೆ ಹೊಡೆದ ಕಾರಣ ಚಾಲಕ ಸ್ಟೇರಿಂಗ್ ಮಧ್ಯದಲ್ಲಿ ಸಿಲುಕಿಕೊಂಡಿದ್ದರು. ಒಮ್ಮೆ ನನ್ನ ಬದುಕಿಸಿ ಎಂಬ ಕೂಗು ಮನ ಕಲಕುವಂತಿತ್ತು. ಹರಸಾಹಸಪಟ್ಟು ಕ್ರೇನ್ ಮೂಲಕ ದೇಹವನ್ನು ಹೊರತೆಗೆದಾಗ ಉಸಿರಾಡುತ್ತಿದ್ದರು. ಕೂಡಲೇ ಆ್ಯಂಬ್ಯುಲೆನ್ಸ್ ಮೂಲಕ ಅವರನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲು ಪ್ರಯತ್ನಿಸಲಾಯಿತು. ಹೆಚ್ಚು ರಕ್ತಸ್ರಾವ ಆದ ಕಾರಣ ದಾರಿ ಮಧ್ಯೆ ಅಸುನೀಗಿದರು ಎಂದು ಚುಪ್ಪ ನಾಗರಾಜ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಬಸ್‌ನಲ್ಲಿ ೨೦ ಜನ ಪ್ರಯಾಣಿಕರಿದ್ದರು. ಎಲ್ಲರೂ ಕೇರಳ ರಾಜ್ಯಕ್ಕೆ ಸಂಬAಧಪಟ್ಟವರು. ಇವರಲ್ಲಿ ಓರ್ವ ಮಹಿಳೆಗೆ ಗಾಯವಾಗಿದ್ದು, ಕೇರಳದ ಇರಟ್ಟಿ ಆಸ್ವತ್ರೆಗೆ ದಾಖಲಿಸಲಾಗಿದೆ. ನಿರ್ವಾಹಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವೀರಾಜಪೇಟೆ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಬ್ಬರಿಗೆ ಕಾಲಿಗೆ ಪೆಟ್ಟಾಗಿದೆ. ಈ ಕುರಿತು ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕರ ಭೇಟಿ: ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾದ ಬಸ್ ಚಾಲಕನ ಮೃತದೇಹವನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ವೀಕ್ಷಿಸಿ ಘಟನೆಯ ಬಗ್ಗೆ ನಿರ್ವಾಹಕ ಪುಟ್ಟರಾಜು ಬಳಿ ಮಾಹಿತಿ ಪಡೆದುಕೊಂಡರು. ವೈದ್ಯರು ಹಾಗೂ ಪೊಲೀಸರಿಗೆ ಆದಷ್ಟು ಬೇಗ ಮೃತದೇಹವನ್ನು ಕುಟುಂಬಸ್ಥರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ಹೇಳಿ ದೂರವಾಣಿ ಮೂಲಕ ಕುಟುಂಬದವರಿಗೆ ಸಾಂತ್ವನ ಹೇಳಿದರು. ಘಟನಾ ಸ್ಥಳಕ್ಕೆ ಸಕಾಲಕ್ಕೆ ತೆರಳಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ಶ್ರಮಿಸಿ ಮಾನವೀಯತೆ ಮೆರೆದ ಚುಪ್ಪಾ ನಾಗರಾಜ್ ಅವರ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಮೃತ ಸ್ವಾಮಿ ಅವರ ನಿವಾಸಕ್ಕೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಭೇಟಿ ನೀಡಿ ಕುಟುಂಬದವರಿಗೆ ಪರಿಹಾರಧನ ನೀಡಿದರು.